ಗದಗ: ನಾಡಿನಾದ್ಯಂತ ಶಿವರಾತ್ರಿ ಸಂಭ್ರಮದಲ್ಲಿ ಮುಳುಗಿದ್ದಾಗಲೇ ದುಷ್ಕರ್ಮಿಗಳು ನಿಧಿ ಆಸೆಯಿಂದ ರಾಮಲಿಂಗೇಶ್ವರ ಹಾಗೂ ನಂದಿ ವಿಗ್ರಹಗಳನ್ನು ಭಗ್ನಗೊಳಿಸಿದ ಘಟನೆ ಶನಿವಾರ ತಡರಾತ್ರಿ ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ರಾಮಲಿಂಗೇಶ್ವರ ಮೂರ್ತಿ, ಎದುರಿಗಿನ ನಂದಿ ವಿಗ್ರಹಗಳನ್ನು ಸಂಪೂರ್ಣವಾಗಿ ಭಗ್ನಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ರಾಮಲಿಂಗೇಶ್ವರ ಮೂರ್ತಿಯ ಪಾಣಿಬಟ್ಟಲು, ನಂದಿವಿಗ್ರಹದ ಮುಖವನ್ನು ಚೂರು ಚೂರು ಮಾಡಲಾಗಿದೆ.
ಮಹಾಶಿವರಾತ್ರಿ ಆಚರಣೆಗೆ ಗ್ರಾಮಸ್ಥರು ರಾಮಲಿಂಗೇಶ್ವರ ದೇವಾಲಯವನ್ನು ಸುಣ್ಣ ಬಣ್ಣ ಬಳಿದು ಅಲಂಕರಿಸಿದ್ದರು. ಇಂದು ಬೆಳಿಗ್ಗೆ ಐದು ಗಂಟೆಗೆ ಭಕ್ತರು, ಅರ್ಚಕರು ದೇವಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಮೂರ್ತಿಗಳನ್ನು ವಿರೂಪಗೊಳಿಸಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಶಿವರಾತ್ರಿ ಪೂಜೆಗೆ ನಿರಾಕರಣೆ: ಕಲಬುರಗಿ ಕೋಟೆ ಸುತ್ತ ಉದ್ವಿಗ್ನ ಸ್ಥಿತಿ
ದೇವಾಲಯಗಳಲ್ಲಿನ ಮೂರ್ತಿ ಭಗ್ನಗೊಂಡ ಸುದ್ದಿ ತಿಳಿಯುತ್ತಲೇ ಗ್ರಾಮಸ್ಥರು ದೇವಾಲಯಕ್ಕೆ ಆಗಮಿಸಿದರು. ಅಷ್ಟರೊಳಗಾಗಿ ಕೆಲವರು ಪೊಲೀಸರಿಗೆ ದೂರವಾಣಿ ಮೂಲಕ ಸುದ್ದಿ ತಿಳಿಸಿದ್ದರಿಂದ ಪೊಲೀಸರು ಆಗಮಿಸಿ ಮುಂದಿನ ಅನಾಹುತವನ್ನು ತಪ್ಪಿಸಿದರು.
ದುಷ್ಕರ್ಮಿಗಳು ದೇವಾಲಯದಲ್ಲಿನ ಮೂರ್ತಿಗಳ ಕೆಳಗಿನ ನಿಧಿಯನ್ನು ಅಪಹರಿಸಲು ಮೂರ್ತಿಗಳನ್ನು ಭಗ್ನಗೊಳಿಸಿರಬಹುದೆಂದು ಅಂದಾಜಿಸಲಾಗಿದೆ. ಕಳೆದೊಂದು ತಿಂಗಳಿನಿಂದ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ, ನಿಧಿ ಪತ್ತೆಯಾದ ನಂತರ ಜಿಲ್ಲೆಯಾದ್ಯಂತ ದೇವಾಲಯದಲ್ಲಿನ ನಿಧಿಯಾಸೆಯಿಂದ ಮೂರ್ತಿಗಳನ್ನು ಕಿತ್ತು ಬಿಸಾಡುವದು, ಭಗ್ನಗೊಳಿಸುವದು ಅವ್ಯಾಹತವಾಗಿ ನಡೆದಿರುವುದು ಪೊಲೀಸರು ಹಾಗೂ ಭಕ್ತರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.























