ಗದಗ: ರೈತರ ಉಗ್ರ ಚಳವಳಿಗೆ ಮಣಿದ ಸರ್ಕಾರ, ಸತ್ಯಾಗ್ರಹ ಅಂತ್ಯ

0
5

ಗದಗ (ಲಕ್ಷ್ಮೇಶ್ವರ): ಕಳೆದ ಏಳು ದಿನಗಳಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ರೈತರು ಇಂದು ಲಕ್ಷ್ಮೇಶ್ವರದಲ್ಲಿ ಬಾರಕೋಲು ಚಳವಳಿ ಮಾಡಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಸಮಗ್ರ ರೈತ ಹೋರಾಟ ಸಮಿತಿ ಹಾಗೂ ವಿವಿಧ ರೈತಪರ ಹಾಗೂ ಕನ್ನಡ ಪರ ಸಂಘಟನೆಯ ಸಹಯೋಗದಲ್ಲಿ ಹೋರಾಟದಲ್ಲಿ ರೈತರು ಆಕ್ರೋಶಭರಿತರಾಗಿ ಪಟ್ಟಣದ ಪಾಳಾ ಬಾದಾಮಿ ರಾಜ್ಯ ಹೆದ್ದಾರಿಯ ಮೇಲೆ ಬಾರಕೋಲಿನಿಂದ ತಮ್ಮನ್ನು ತಾವೆ ದಂಡಿಸಿಕೊಂಡರು. ಹೋರಾಟದ ಮುಂಚೂಣಿಯಲ್ಲಿರುವ ಮಂಜುನಾಥ ಮಾಗಡಿ, ಶರಣು ಗೋಡಿ, ನೀಲಪ್ಪ ಶರಶೂರಿ, ಮುಂತಾದವರು ಬಾರಕೋಲಿನಿಂದ ಪೆಟ್ಟು ತಿಂದರು. ಇದು ಸರ್ಕಾರಕ್ಕೆ ಅಪರೋಕ್ಷವಾಗಿ ರೈತ ಸಮುದಾಯ ಬೀದಿಗಿಳಿದರೆ ಯಾವ ಹಂತ ತಲುಪುತ್ತದೆ ಎಂಬುದನ್ನು ಎಚ್ಚರಿಕೆ ನೀಡಿದಂತಿತ್ತು.

ಆದರೆ ಕಾಕತಾಳೀಯ ಎಂಬಂತೆ ಸಂಜೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸರ್ಕಾರದ ಖಚಿತ ಭರವಸೆ ನೀಡಿ ಸತ್ಯಾಗ್ರಹ ಹೋರಾಟ ಅಂತ್ಯಗೊಳಿಸುವಲ್ಲಿ ಶ್ರಮಿಸಿದರು. ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ದೊರೆತ ಜಯ ಇದು ಎಂದು ರೈತರೂ ಸಂಭ್ರಮಿಸಿದ್ದಾರೆ. ಆದರೆ, ಸತ್ಯಾಗ್ರಹ ಕೊನೆಗೊಂಡರೂ ಧರಣಿ ಮುಂದುವರೆಯುವುದು ಎಂದು ರೈತರು ಹೇಳಿದ್ದಾರೆ.

ಕಳೆದ ಐದು ದಿನಗಳಿಂದ ಧರಣಿ ಸತ್ಯಾಗ್ರಹ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡು ಅಸ್ವಸ್ಥಗೊಂಡು ಗುರುವಾರ ಆಸ್ಪತೆಗೆ ದಾಖಲಾಗಿದ್ದ ಆದರಹಳ್ಳಿ ಗ್ರಾಮದ ಗವಿಮಠ ಡಾ. ಕುಮಾರ ಮಹಾರಾಜರನ್ನು ಅಂಬ್ಯುಲೆನ್ಸ್ ಮೂಲಕ ಸತ್ಯಾಗ್ರಹ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು. ಆಸ್ಪತ್ರೆಯಲ್ಲಿದ್ದರೂ ಕೂಡಾ ಶ್ರೀಗಳು ಆಹಾರ ಸೇವಿಸಲು ಒಪ್ಪಿರಲಿಲ್ಲ, ಇದೀಗ ಜಿಲ್ಲಾಧಿಕಾರಿಗಳು ಸರಕಾರದ ನಿರ್ಣಯ ಶ್ರೀಗಳಿಗೆ ತಿಳಿಸಿ ಎಳನೀರನ್ನು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹ ಕೈಬಿಟ್ಟರು. ಅವರೊಂದಿಗೆ ಕಳೆದ ಆರು ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪ್ರರ್ಣಾಜಿ ಖರಾಟೆ, ಬಸವರಾಜ ಬೆಂಡಿಗೇರಿಯವರು ಸಹ ಉಪವಾಸ ಸತ್ಯಾಗ್ರಹ ಕೈಬಿಟ್ಟರು.

ಶುಕ್ರವಾರ ಮಧ್ಯಾಹ್ನ ಪಟ್ಟಣದ ಶಿಗ್ಲಿ ನಾಕಾ ಬಳಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರವರು ರೈತರನ್ನು ಉದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿಗಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಸಭೆ ನಡೆಸಿ ನಿರ್ಧರಿಸಿದ್ದು ಸೋಮವಾರ ಅಥವಾ ಮಂಗಳವಾರ ಆದೇಶ ಹೊರಡಿಸಲಾಗುವದು. ಇದು ರೈತರ ಹೋರಾಟಕ್ಕೆ ಸಂದ ಜಯ, ಹೋರಾಟ ಕೈಬಿಡುವಂತೆ ಮನವಿ ಮಾಡಿದರು.

ಧರಣಿ ಮುಂದುವರಿಕೆ: ರೈತರ ಮುಂಡರಾದ ಮಂಜುನಾಥ ಮಾಗಡಿ ಮತ್ತು ಹೋರಾಟಗಾರ ರವಿಕಾಂತ ಅಂಗಡಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದಕ್ಕೆ ತೀರ್ಮಾನ ತೆಗೆದುಕೊಂಡಿದ್ದು ಖುಷಿಯ ವಿಚಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವವರೆಗೂ ರೈತರ ಧರಣಿ ಸತ್ಯಾಗ್ರಹ ಮುಂದವರಿಸಲಾಗುವುದು ಎಂದರು.

Previous articleಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಂಧನ
Next articleನಾನು ರಾಜಕಾರಣಿ, ಸಂನ್ಯಾಸಿ ಅಲ್ಲ

LEAVE A REPLY

Please enter your comment!
Please enter your name here