ಸಿಎಂ ಅವಧಿ ಕ್ವಾಂಟಿಟಿಗಿಂತ ಕ್ವಾಲಿಟಿ ಬಗ್ಗೆ ಚರ್ಚೆಯಾಗಬೇಕು

0
4

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯ ಕುರಿತು ಕ್ವಾಂಟಿಟಿಗಿಂತ ಕ್ವಾಲಿಟಿ ಬಗ್ಗೆ ಚರ್ಚೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅತ್ಯಂತ ಸುದೀರ್ಘ ಅವಧಿಗೆ ಸಿಎಂ ಆಗಿ ಕೆಲಸ ಮಾಡಿದ್ದಾರೆ ಎಂದು ಕೆಲವರು ಮಾಡುತ್ತಿದ್ದಾರೆ. ಎಷ್ಟು ದಿನ ಮುಖ್ಯಮಂತ್ರಿ ಆಗಿದ್ದೀರಿ ಎನ್ನುವುದಕ್ಕಿಂತ ಅಷ್ಟು ದಿನಗಳಲ್ಲಿ ಏನು ಸಾಧನೆ ಮಾಡಿದ್ದೀರಿ, ರಾಜ್ಯವನ್ನು ಯಾವ ಪ್ರಗತಿಯಲ್ಲಿ ತೆಗೆದುಕೊಂಡು ಹೋಗಿದ್ದೀರಿ, ನಿಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಜನ ಬಡವರು, ಹಿಂದುಳಿದವರಿಗೆ ಒಳ್ಳೆಯದಾಗಿದೆ. ಒಟ್ಟಾರೆ ರಾಜ್ಯದ ಆರ್ಥಿಕತೆ ಏನು ಸುಧಾರಣೆ ಆಗಿದೆ ಎನ್ನುವುದು ಬಹಳ ಮುಖ್ಯ ಅದು ಚರ್ಚೆ ಆಗಬೇಕಿದೆ. ಕ್ವಾಂಟಿಟಿಗಿಂತ ಕ್ವಾಲಿಟಿ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಐದು ವರ್ಷ ನಾನೇ ಸಿಎಂ: ಹೈಕಮಾಂಡ್ ತೀರ್ಮಾನ ಅಂತಿಮ

ಕಪ್ಪು ಚುಕ್ಕೆ: ಬಳ್ಳಾರಿಯಲ್ಲಿನ ಗಲಾಟೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಬೀದರ್, ಬಳ್ಳಾರಿಯಲ್ಲಿ ಆಗುತ್ತಿರುವ ಬೆಳವಣಿಗೆ ಸರಿಯಾದದ್ದಲ್ಲ, ಜನಪ್ರತಿನಿಧಿಗಳಿಗೆ ಶೋಭೆ ತರುವಂಥದ್ದಲ್ಲಾ, ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಇರುವುದು ಸಾಮಾನ್ಯ ಅದನ್ನು ಗೌರವಯುತ ಚೌಕಟ್ಟಿನಲ್ಲಿ ಮಾಡಬೇಕು‌. ಅದನ್ನು ಬಿಟ್ಟು ಮಾಡುವುದು ಒಳ್ಳೆಯದಲ್ಲ. ಬಳ್ಳಾರಿ ಘಟನೆ ಕ್ರಿಮಿನಲ್ ಕೃತ್ಯ. ಈಗಾಗಲೇ ಯಾರಿಂದ ಗುಂಡು ತಗುಲಿದೆ ಎನ್ನುವುದು ಗೊತ್ತಾಗಿದೆ. ಅವನು ಯಾರ ಪ್ರೇರಣೆಯಿಂದ ಗುಂಡು ಹಾರಿಸಿದ ಎನ್ನುವುದನ್ನು ತಿಳಿದು ಅವನನ್ನು ಬಂಧಿಸುವುದು ಮುಖ್ಯ. ಅಂದಾಗ ಮಾತ್ರ ಇದರ ಹಿಂದಿರುವ ಷಡ್ಯಂತ್ರ ಬಯಲಾಗುತ್ತದೆ. ಒಬ್ಬರ ಮನೆ ಮುಂದೆ ಬಂದು ಗಲಾಟೆ ಮಾಡಿ ಗುಂಡು ಹಾರಿಸುವ ಮಟ್ಟಕ್ಕೆ ಹೋಗುತ್ತಿದೆ ಅಂದರೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಪೊಲೀಸರ ಭಯ ಇಲ್ಲ. ಪೊಲೀಸರೆ ಹಲವಾರು ಅಪರಾಧದಲ್ಲಿ ತೊಡಗಿರುವುದು‌. ಹಲವಾರು ಪೊಲೀಸರು ಅಮಾನತಾಗುತ್ತಿರುವುದು ನೋಡಿದಾಗ ಇಲಾಖೆಯ ನೈತಿಕತೆ ಸಂಪೂರ್ಣ ಕುಸಿದು ಹೋಗಿದೆ. ಮುಖ್ಯಮಂತ್ರಿಗಳು ದಾಖಲೆ ಪ್ರಮಾಣದ ಆಡಳಿತ ಮಾಡುತ್ತಿರುವ ಸಂದರ್ಭದಲ್ಲಿ ಇಷ್ಟೊಂದು ಕಪ್ಪು ಚುಕ್ಕೆ ಹೊತ್ತುಕೊಳ್ಳುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಬಳ್ಳಾರಿ ಪ್ರಕರಣ: ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ

ಮುಚ್ಚಿ ಹಾಕುವ ಪ್ರಯತ್ನ: ಮೃತ ಕಾಂಗ್ರೆಸ್ ಕಾರ್ಯಕರ್ತನ ದೇಹವನ್ನು ಎರಡು ಬಾರಿ ಪೋಸ್ಟ್ ಮಾರ್ಟ್ಂ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ನಡೆದಿರುವ ಘಟನೆ, ಘಟನೆ ನಡೆದಾಗ ಪೊಲಿಸರು ನಡೆದುಕೊಂಡ ರೀತಿ ಅಲ್ಲಿ ಸಿಕ್ಕಿರುವ ಬುಲೆಟ್‌ಗಳು, ಬಾಂಬ್‌ಗಳು ಎಲ್ಲವನ್ನೂ ನೋಡಿದಾಗ, ಆ ಮೇಲೆ ತನಿಖೆ ಯಾವ ರೀತಿ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿದಾಗ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಪೋಸ್ಟ್‌ಮಾರ್ಟ್ಂ ಎರಡು ಸಾರಿ ಮಾಡಿದ್ದಾರೆ ಎನ್ನುವುದು ಅದೇ ರೀತಿ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಹೇಳಿದರು.

Previous articleಬಳ್ಳಾರಿ ಪ್ರಕರಣ: ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ
Next articleಜನವರಿ 9ರಿಂದ “ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್”