ಧಾರವಾಡ: ಇಲ್ಲಿಯ ಕಮಲಾಪುರ ಸರಕಾರಿ ಪ್ರಾಥಮಿಕ ಶಾಲೆಯಿಂದ ಇಬ್ಬರು ಮಕ್ಕಳನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಣ ಮಾಡಿಕೊಂಡು ಹೋದ ಘಟನೆ ಸೋಮವಾರ ಹಾಡುಹಗಲೇ ಸಂಭವಿಸಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.
ಇಲ್ಲಿಯ ಕಮಲಾಪುರ ಸರಕಾರಿ ಶಾಲೆಯ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಓರ್ವ ಬಾಲಕ ಮತ್ತು ಓರ್ವ ಬಾಲಕಿಯನ್ನು ಸೋಮವಾರ ಮಧ್ಯಾಹ್ನ ಊಟದ ಬಿಡುವು ಬಿಟ್ಟಾಗ ಬೈಕ್ ಮೇಲೆ ಕೂರಿಸಿಕೊಂಡು ವ್ಯಕ್ತಿಯೋರ್ವ ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂದು ತಿಳಿದು ಬಂದಿದ್ದು, ಕಮಲಾಪುರದ ಓರ್ವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಮಕ್ಕಳನ್ನು ಕೂಡಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಸೆರೆಯಾಗಿವೆ.
ಸದ್ಯ ಅಪಹರಣ ಮಾಡಿಕೊಂಡು ಹೋಗಿರುವ ವ್ಯಕ್ತಿ ಅಬ್ದುಲ್ ಕರಿಮ್ ಮೇಸ್ತ್ರಿ ಎಂದು ತಿಳಿದು ಬಂದಿದ್ದು, ಈತ ಮಕ್ಕಳನ್ನು ಜೋಯ್ಡಾಕ್ಕೆ ಕರೆದುಕೊಂಡು ಹೋಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಲ್ಲಿ ಈತನ ಬೈಕ್ ಅಪಘಾತವಾಗಿದ್ದು, ಆ ವ್ಯಕ್ತಿ ಸಮೀಪದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಆದರೆ, ಅಪಹರಣಕ್ಕೆ ಒಳಗಾಗಿರುವ ಮಕ್ಕಳು ಎಲ್ಲಿದ್ದಾರೆ…? ಯಾವ ಉದ್ದೇಶಕ್ಕಾಗಿ ಮಕ್ಕಳನ್ನು ಅಪಹರಣ ಮಾಡಲಾಗಿದೆ ಎಂಬ ಮಾಹಿತಿ ಮಾತ್ರ ಈ ವರೆಗೆ ಲಭ್ಯವಾಗಿಲ್ಲ. ಸದ್ಯ ಪ್ರಕರಣವನ್ನು ಬೆನ್ನಟ್ಟಿರುವ ಉಪನಗರ ಠಾಣೆ ಪೊಲೀಸರ ಒಂದು ತಂಡ ಜೋಯ್ಡಾಕ್ಕೆ ತೆರಳಿದ್ದು, ಮಂಗಳವಾರ ಮಕ್ಕಳನ್ನು ಧಾರವಾಡಕ್ಕೆ ಕರೆತರುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.






















