BJPಯಲ್ಲಿ ಅಸಮಾಧಾನದ ಧ್ವನಿ: 37 ವರ್ಷದ ಸೇವೆಗೆ ಅವಮಾನ – ಪಕ್ಷದ ನಾಯಕರಿಗೆ ಎಚ್ಚರಿಕೆ
ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಟಿಕೆಟ್ ಲಭಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಲಿಂಗರಾಜ ಪಾಟೀಲ ಅವರು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬುಧವಾರ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾವನಾತ್ಮಕವಾಗಿ ಗದ್ಗ್ಗದಿತ ಧ್ವನಿಯಲ್ಲೇ ಮಾತನಾಡಿದ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು. ಜೊತೆಗೆ ತಮ್ಮ ರಾಜೀನಾಮೆ ಪತ್ರವನ್ನು ಬಿ.ವೈ.ವಿಜಯೇಂದ್ರ (B. Y. Vijayendra) ಅವರಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಪಕ್ಷದ ನಾಯಕರ ವಿರುದ್ಧ ಅಸಮಾಧಾನ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಂಗರಾಜ ಪಾಟೀಲ, ಕಾರ್ಯಕರ್ತರ ಬೆಳವಣಿಗೆಯನ್ನು ಸಹಿಸದ ಕೆಲ ನಾಯಕರ ಮನಸ್ಥಿತಿಯಿಂದ ರಾಜ್ಯದಲ್ಲಿ ಬಿಜೆಪಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು. ಈ ರೀತಿಯ ಅನುಭವಗಳು ನನಗೆ ಹಲವು ಬಾರಿ ಆಗಿದ್ದರೂ ಸಹಿಸಿಕೊಂಡಿದ್ದೆ. ಈ ಬಾರಿ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು ಎಂದು ಅವರು ಹೇಳಿದರು.
ಸಂಕನೂರಿಗೆ ಟಿಕೆಟ್ ನೀಡಿದಕ್ಕೆ ಬೇಸರ: ಆದರೆ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿಲ್ಲದವರಾದ ಎಸ್.ವಿ. ಸಂಕನೂರ ಅವರಿಗೆ ಮತ್ತೆ ಟಿಕೆಟ್ ನೀಡಿರುವುದು ನನ್ನ 37 ವರ್ಷಗಳ ನಿಸ್ವಾರ್ಥ ಸೇವೆಗೆ ತೋರಿದ ಅವಮಾನ ಎಂದು ಲಿಂಗರಾಜ ಪಾಟೀಲ ಬೇಸರ ವ್ಯಕ್ತಪಡಿಸಿದರು.
ನನಗೆ ಟಿಕೆಟ್ ದೊರೆತರೆ ಮತ್ತೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ ಎಂಬ ದುರುದ್ದೇಶದಿಂದ ನನಗೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಪಕ್ಷದ ನಾಯಕರಿಗೆ 8 ದಿನ ಗಡುವು: ಈಗಲೂ ಸಮಯ ಮೀರಿಲ್ಲ. ಸಂಕನೂರ ಅವರ ಟಿಕೆಟ್ ಹಿಂಪಡೆಯಲು ಪಕ್ಷದ ನಾಯಕರಿಗೆ 8 ದಿನಗಳ ಗಡುವು ನೀಡುತ್ತಿದ್ದೇನೆ. ಈ ಅವಧಿಯಲ್ಲಿ ಟಿಕೆಟ್ ಹಿಂಪಡೆದು ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡದಿದ್ದರೆ ಮುಂದಿನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.
ಬಿಜೆಪಿ ತೊರೆಯುವುದಿಲ್ಲ: ಅದೇ ವೇಳೆ ಬಿಜೆಪಿ ನಮ್ಮ ಮಾತೃಪಕ್ಷವಾಗಿದೆ. ಅದನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷದೊಳಗೇ ಇದ್ದುಕೊಂಡು ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ.























