ಹುಬ್ಬಳ್ಳಿ: ನಗರದ ನವನಗರ ಪ್ರದೇಶದಲ್ಲಿ ನಿನ್ನೆ ತಡರಾತ್ರಿ (ಗುರುವಾರ ರಾತ್ರಿ) ಚಿರತೆ ಕಾಣಿಸಿಕೊಂಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚಿರತೆ ಓಡಾಡುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದ ಕಾಂಪೌಂಡ್ ಒಳಭಾಗ ಹಾಗೂ ಗಾಮನಗಟ್ಟಿ ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕೂಡ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಮೆಟ್ರೋ ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ
ಮೈಸೂರಿನಿಂದ ಆಗಮಿಸಿರುವ ವಿಶೇಷ ಕಾರ್ಯಾಚರಣೆ ಪಡೆ (Special Task Force) ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ವಿಮಾನ ನಿಲ್ದಾಣದ ಆವರಣದೊಳಗೆ ಚಿರತೆ ಓಡಾಡುತ್ತಿರುವುದು ಖಚಿತವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಚಿರತೆ ಸಂಚಾರ ಇರುವ ಪ್ರದೇಶಗಳಲ್ಲಿ ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಪಂಜರಗಳನ್ನು ಇಡಲಾಗಿದೆ.
ಚಿರತೆ ಕಾಣಿಸಿಕೊಂಡಿರುವ ನವನಗರ, ವಿಮಾನ ನಿಲ್ದಾಣ ಹಾಗೂ ಗಾಮನಗಟ್ಟಿ ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದ್ದು, ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಹಾಗೂ ರಾತ್ರಿ ಸಮಯದಲ್ಲಿ ವಿಶೇಷ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಮನವಿ ಮಾಡಿವೆ. ಶಾಲಾ ಮಕ್ಕಳ ಮತ್ತು ವೃದ್ಧರ ಸುರಕ್ಷತೆಯ ದೃಷ್ಟಿಯಿಂದ ಪೆಟ್ರೋಲಿಂಗ್ ಹೆಚ್ಚಿಸಲಾಗಿದೆ.
ಇದನ್ನೂ ಓದಿ: KLE ಸೊಸೈಟಿ ಪದಾಧಿಕಾರಿಗಳ ಆಯ್ಕೆ ಅವಿರೋಧ
ಚಿರತೆ ಸೆರೆಸಿಗುವವರೆಗೆ ಕಾರ್ಯಾಚರಣೆ ಮುಂದುವರೆಯಲಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರ ಪ್ರದೇಶದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕದ ಜೊತೆಗೆ ವನ್ಯಜೀವಿ ಸಂರಕ್ಷಣೆ ಮತ್ತು ಮಾನವ–ವನ್ಯಜೀವಿ ಸಂಘರ್ಷದ ಕುರಿತು ಚರ್ಚೆಗೆ ಕಾರಣವಾಗಿದೆ.







