ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ಪವರ್ ಶೇರಿಂಗ್ ವಿಚಾರವಾಗಿ ಕುದುರೆ ವ್ಯಾಪಾರ ಆರಂಭ ಆಗಿದೆ. ಎಷ್ಟಕ್ಕೆ ವ್ಯಾಪಾರ ಕುದುರಿಸಲಾಗಿದೆ ಎಂದು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದ ಗದ್ದುಗೆ ಏರಲು ಎರಡು ಬಣಗಳು ಸೃಷ್ಟಿಯಾಗಿವೆ. ಎರಡೂ ಬಣಗಳು ಪರಸ್ಪರ ಶಾಸಕ, ಸಚಿವರನ್ನು ಸೆಳೆಯಲು ನಿರಂತರ ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ರಾಜ್ಯದ ಜನರ ಹಿತವನ್ನೇ ಮರೆತಂತಿದೆ ಎಂದು ವ್ಯಂಗ್ಯವಾಡಿದರು.
ಸಿಎಂ ಹಾಗೂ ಡಿಸಿಎಂ ವಾರ್ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ನೇರವಾಗಿ ಮಾತನಾಡದೇ ಅವರವರ ಬೆಂಬಲಿಗರ ಕಡೆಯಿಂದ ಹೇಳಿಕೆ ಕೊಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿದ್ದಾರೆ. ಅಲ್ಲದೇ, ಹೈಕಮಾಂಡ್ ಮನೆಗೂ ಬೆಂಬಲಿಗರನ್ನು ಕಳಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ತಿಕ್ಕಾಟದ ಕಾರಣ ಬೆಳಗಾವಿ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ವಿಚಾರವಾಗಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಭೆ ನಾಯಕ ಆರ್. ಅಶೋಕ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಧಿವೇಶನದಲ್ಲಿ ಯಾವ ವಿಷಯದ ಮೇಲೆ ಹೋರಾಟ, ಚರ್ಚೆ ನಡೆಸಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲದೇ, ಅವಿಶ್ವಾಸ ನಿರ್ಣಯ ಮಾಡುವುದು ಮಹತ್ವದ್ದಾಗಿದ್ದು, ಬಿಜೆಪಿ ಶಾಸಕಾಂಗದ ಪ್ರಮುಖರು ಈ ಬಗ್ಗೆ ಹೇಳಬೇಕು ಎಂದರು.


























