ಧಾರವಾಡ: ನಗರದ ಮಾಳಮಡ್ಡಿ ಬಡಾವಣೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಹಣ್ಣು ಅಂಗಡಿ ಸೇರಿ ಮೂರು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಬೆಳ್ಳಂ ಬೆಳಗ್ಗೆ ಸಂಭವಿಸಿದ ಈ ಅವಘಡದಲ್ಲಿ ಭಾರೀ ನಷ್ಟ ಸಂಭವಿಸಿದರೂ, ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಮಾಳಮಡ್ಡಿ ಬಡಾವಣೆಯ ವಾಣಿಜ್ಯ ಪ್ರದೇಶದಲ್ಲಿರುವ ಅಂಗಡಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೀರು ಹಾಗೂ ಇತರ ಲಭ್ಯವಿದ್ದ ಸಾಧನಗಳ ಸಹಾಯದಿಂದ ಬೆಂಕಿ ಆರಿಸಲು ಯತ್ನಿಸಿದ್ದಾರೆ.
ಇದನ್ನೂ ಓದಿ: ದಾಖಲೆ ಬರೆಯುತ್ತಿರುವ ಸಿಎಂಗೆ ಡಿ.ಕೆ. ಶಿವಕುಮಾರ ಶುಭ ಹಾರೈಕೆ
ಬೆಂಕಿಯ ತೀವ್ರತೆ ಹೆಚ್ಚುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಶೀಘ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಈ ಅವಘಡದಲ್ಲಿ ಹಣ್ಣು ಅಂಗಡಿ ಸೇರಿದಂತೆ ಎರಡು ಅಂಗಡಿಗಳು ಸಂಪೂರ್ಣವಾಗಿ ನಿರ್ನಾಮವಾಗಿದ್ದು, ಮತ್ತೊಂದು ಅಂಗಡಿಗೆ ಭಾಗಶಃ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಅಂಗಡಿಗಳಲ್ಲಿದ್ದ ಸರಕುಸಾಮಾನು, ವಿದ್ಯುತ್ ಉಪಕರಣಗಳು ಮತ್ತು ಇತರ ವಸ್ತುಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಅರಸು ದಾಖಲೆ ಮುರಿಯುತ್ತಿರುವ ಸಿದ್ದರಾಮಯ್ಯ ಏಕೆ ಹೀಗಂದ್ರು?
ಈ ಘಟನೆ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದ ನಿಖರ ಕಾರಣ ಮತ್ತು ನಷ್ಟದ ಪ್ರಮಾಣದ ಕುರಿತು ತನಿಖೆ ಮುಂದುವರಿದಿದೆ. ನಿರಂತರವಾಗಿ ಸಂಭವಿಸುತ್ತಿರುವ ಶಾರ್ಟ್ ಸರ್ಕ್ಯೂಟ್ ಅವಘಡಗಳ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಅಗ್ನಿಶಾಮಕ ಇಲಾಖೆ ಸಲಹೆ ನೀಡಿದೆ.























