ದಾವಣಗೆರೆ: ಶ್ವಾಸಕೇಂದ್ರವು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶ್ವಾಸದ ಹೆಸರಿನಲ್ಲಾಗಲಿ ಅಥವಾ ತಮ್ಮ ವೈಯಕ್ತಿಕ ಹೆಸರಿನಲ್ಲಾಗಲಿ ಒಂದು ಇಂಚು ಭೂಮಿಯೂ ಇಲ್ಲ. ಪಂಚಮಸಾಲಿ ಯಾವುದೇ ಹಣ ಅಲ್ಲಿಗೆ ಹೋಗಿಲ್ಲ. ಬದಲಿಗೆ ಶ್ವಾಸದ ಹಣವೇ ಇಲ್ಲಿಗೆ ಬಂದಿದೆ, ಶೀಘ್ರದಲ್ಲಿಯೇ ಬ್ಯಾಂಕ್ ಖಾತೆಯಿಂದ ನಡೆದಿರುವ ವ್ಯವಹಾರದ ಪ್ರತಿಯನ್ನು ಬಿಡುಗಡೆಗೊಳಿಸುವೆ ಎಂದು ಹರಿಹರದ ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ತಿಳಿಸಿದರು.
ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಸ್ಟಿಗಳು ಶ್ವಾಸಕೇಂದ್ರಕ್ಕೆ ಇಲ್ಲಿನ ಹಣವನ್ನು ನಾನು ಬಳಸಿಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ, ಕಾರ್ಯನಿಮಿತ್ತ ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಶ್ವಾಸಕೇಂದ್ರದಲ್ಲಿ ಉಳಿದುಕೊಂಡು ಕಾರ್ಯಕ್ರಮಗಳಿಗೆ ತೆರಳುತ್ತಿದ್ದೇವೆಯೇ ಹೊರತು, ಪಂಚಮಸಾಲಿ ಯಾವುದೇ ಹಣ ಅಲ್ಲಿಗೆ ಹೋಗಿಲ್ಲ. ಈ ವಿಷಯದಲ್ಲಿ ತಾವು ಅತ್ಯಂತ ಪಾರದರ್ಶಕವಾಗಿದ್ದು, ಅಸಲಿಗೆ ಅಲ್ಲಿನ ಹಣವೇ ಇತ್ತ ಬಂದಿರುವುದಕ್ಕೆ ದಾಖಲೆಗಳಿವೆ ಎಂದು ಆರೋಪ ತಳ್ಳಿಹಾಕಿದರು.
ಪೂರ್ವಾಶ್ರಮದ ತಂದೆಯವರು ಸಿದ್ದೇಶ್ವರ ಸ್ವಾಮೀಜಿಗಳ ಆಪ್ತರಾಗಿದ್ದರು, ತಂದೆ ಪ್ರಾಣ ತ್ಯಜಿಸಿದಾಗಲೂ ತಾವು ಮನೆಗೆ ಹೋಗದೆ ಆಸ್ಪತ್ರೆಗೆ ತೆರಳಿದ್ದಾಗಿ ಸ್ಮರಿಸಿದ ಶ್ರೀಗಳು, ತಾವು ಎಂಟನೇ ವಯಸ್ಸಿನಲ್ಲೇ ಮನೆ ಬಿಟ್ಟು ಬಂದಿದ್ದು, ಅಂದಿನಿಂದ ಇಂದಿನವರೆಗೆ ತಮ್ಮ ಪೂರ್ವಾಶ್ರಮದ ಮನೆಗೆ ಹೆಜ್ಜೆ ಇಟ್ಟಿಲ್ಲ. ಸನ್ಯಾಸ ಸ್ವೀಕಾರ ಮಾಡಿ 25 ವರ್ಷಗಳಾಗಿದ್ದು, ತಮ್ಮ ಕುರಿತು ಈ ಬಗ್ಗೆ ಇಳಕಲ್ ಮಠದ ಗುರುಮಹಾಂತ ಸ್ವಾಮೀಜಿಗಳ ಬಳಿ ವಿಚಾರಿಸಬಹುದು ಎಂದರು.
ತಾಯಿಯ ಗರ್ಭದಲ್ಲಿದ್ದಾಗಲೇ ಗುರುವಿನಿಂದ ದೀಕ್ಷೆ ಪಡೆದು ಬಡತನದಿಂದ ಬಂದ ತಮಗೆ ಹಣ ಮಾಡುವ ಯಾವುದೇ ಹಂಬಲವಿಲ್ಲ. ಜಗತ್ತನ್ನೇ ಸುತ್ತಿ ಬಂದಿರುವ ತಮಗೆ ಸಮಾಜ ಸೇವೆಯೇ ಮೂಲ ಮಂತ್ರವಾಗಿದೆ. ನಾಡಿನ ಅನೇಕ ಮಠಾಧೀಶರೊಂದಿಗೆ ಎರಡು ದಶಕಗಳ ಉತ್ತಮ ಒಡನಾಟವಿದ್ದು, ಹಣಕಾಸಿನ ವ್ಯವಹಾರ ಅಥವಾ ಇತರೆ ಗೊಂದಲಗಳಿಗೆ ಸಂಬಂಧಿಸಿದಂತೆ ಟ್ರಸ್ಟಿಗಳು ಮತ್ತು ಆಡಳಿತಾಧಿಕಾರಿಗಳಾದ ಡಾ. ರಾಜ್‌ಕುಮಾರ್ ಅವರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಪಂಚಮಸಾಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಏಕೈಕ ಉದ್ದೇಶವಾಗಿದ್ದು, ಸಮಾಜವೇ ನನ್ನ ಉಸಿರು ಮತ್ತು ಸರ್ವಸ್ವವಾಗಿದೆ ಎಂದರು.






















