Home Advertisement
Home ನಮ್ಮ ಜಿಲ್ಲೆ ದಾವಣಗೆರೆ ʻಹಿಮೋಫಿಲಿಯಾ’ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌

ʻಹಿಮೋಫಿಲಿಯಾ’ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌

0
294

ನಾಲ್ಕು ದಶಕಗಳ ಹೋರಾಟಕ್ಕೆ ಸಾರ್ಥಕತೆ: ಹಿಮೋಫಿಲಿಯಾ ರೋಗಿಗಳಿಗೆ ರಾಜ್ಯ ಸರ್ಕಾರದ ಮಹತ್ವದ ನೆರವು

ಕಾವ್ಯ ಬಿ.ಕೆ

ದಾವಣಗೆರೆ/ಬೆಂಗಳೂರು: ರಕ್ತ ಹೆಪ್ಪುಗಟ್ಟುವ ಪ್ರೊಟೀನ್ ಕೊರತೆಯಿಂದ ಉಂಟಾಗುವ ಹಿಮೋಫಿಲಿಯಾ (ಕುಸುಮ ರೋಗ) ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಹಲವು ದಶಕಗಳಿಂದ ನಿರಂತರ ಹೋರಾಟದ ಫಲವಾಗಿ, ಹಿಮೋಫಿಲಿಯಾ ರೋಗಿಗಳಿಗೆ ಅತ್ಯಾಧುನಿಕ ‘ನಾನ್-ಫ್ಯಾಕ್ಟರ್ ಥೆರಪಿ’ ಹಾಗೂ ರಾಜ್ಯಾದ್ಯಂತ ತುರ್ತು ಸೇವೆಗಾಗಿ 108 ಅಂಬ್ಯುಲೆನ್ಸ್ ಸೌಲಭ್ಯವನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ.

ಈ ಚಿಕಿತ್ಸಾ ಪದ್ಧತಿಗೆ ಇದೇ ಫೆಬ್ರವರಿ 25ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದು, ಆರೋಗ್ಯ ಸಚಿವ ದಿನೇಶ ಗುಂಡುರಾವ್‌ ಸೇರಿದಂತೆ ಹಲವರು ಉಪಸ್ಥಿತರಿರುವರು.

ಇದನ್ನೂ ಓದಿ: ಧಾರವಾಡ ಪ್ರತಿಭಟನೆ: ಉದ್ಯೋಗಾಕಾಂಕ್ಷಿಗಳೊಂದಿಗೆ ಸರ್ಕಾರ ದೃಢವಾಗಿ ನಿಂತಿದೆ – ಸಿಎಂ ಭರವಸೆ

2400ಕ್ಕೂ ಹೆಚ್ಚು ರೋಗಿಗಳಿಗೆ ಆಶಾಕಿರಣ: ರಾಜ್ಯಾದ್ಯಂತ ಸುಮಾರು 2400ಕ್ಕೂ ಹೆಚ್ಚು ಮಂದಿ ಹಿಮೋಫಿಲಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ರಕ್ತಸ್ರಾವ ನಿಯಂತ್ರಿಸಲು ಅಗತ್ಯವಿರುವ ಫ್ಯಾಕ್ಟರ್ ಥೆರಪಿ ಲಭ್ಯತೆ ದೊಡ್ಡ ಸವಾಲಾಗಿತ್ತು. ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿ ವ್ಯಾಪ್ತಿಯಲ್ಲಿ ಮನೆಬಾಗಿಲಿಗೆ ತೆರಳಿ ತುರ್ತು ಚಿಕಿತ್ಸೆ ನೀಡುವ ಕಾರ್ಯ ನಡೆಯುತ್ತಿತ್ತು.

ಪದ್ಮಶ್ರೀ ಪುರಸ್ಕೃತ ಹಾಗೂ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷರಾದ ಸುರೇಶ್ ಹನಗವಾಡಿ ಅವರು ನಾಲ್ಕು ದಶಕಗಳಿಂದ ನಡೆಸಿದ ಹೋರಾಟದ ಫಲವಾಗಿ ಈ ನಿರ್ಧಾರ ಸಾಧ್ಯವಾಗಿದೆ.

ಇದನ್ನೂ ಓದಿ: ‘ಕೇರಳ’ದ ಹೆಸರು ಬದಲಾವಣೆ: ಕೇಂದ್ರ ಸಚಿವ ಸಂಪುಟ ಅನುಮೋದನೆ

ಕ್ರಾಂತಿಕಾರಿ ಚಿಕಿತ್ಸಾ ಪದ್ಧತಿ: ಹಿಮೋಫಿಲಿಯಾ ರೋಗಿಗಳಿಗೆ ಅತ್ಯಗತ್ಯವಾದ ಪ್ರೊಫಿಲ್ಯಾಕ್ಸಿಸ್ (ನಿರೋಧಕ) ಚಿಕಿತ್ಸೆ ಈಗ ಅಧಿಕೃತವಾಗಿ ಜಾರಿಯಾಗಲಿದೆ. ನಾನ್-ಫ್ಯಾಕ್ಟರ್ ಥೆರಪಿ ಮೂಲಕ ತಿಂಗಳಿಗೊಮ್ಮೆ ಇಂಜೆಕ್ಷನ್ ನೀಡುವುದರಿಂದ ರಕ್ತಸ್ರಾವವನ್ನು ನಿಯಂತ್ರಿಸಬಹುದು. ಇದು ಮಧುಮೇಹ ರೋಗಿಗಳು ಇನ್ಸುಲಿನ್ ಪಡೆಯುವ ಮಾದರಿಯಲ್ಲೇ ಇರಲಿದೆ.

ಈ ವಿಧಾನದಿಂದ ಪದೇಪದೇ ರಕ್ತಸ್ರಾವದಿಂದ ಉಂಟಾಗುವ ಅಂಗವೈಕಲ್ಯವನ್ನು ತಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶಾಶ್ವತ ವೈಕಲ್ಯ, ಬ್ರೇನ್ ಹೆಮರೇಜ್ ಮುಂತಾದ ಪ್ರಾಣಾಪಾಯದ ಪರಿಸ್ಥಿತಿಗಳನ್ನು ತಪ್ಪಿಸಲು ಇದು ಸಹಾಯಕವಾಗಲಿದೆ.

ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್

108 ಅಂಬ್ಯುಲೆನ್ಸ್ ಸೇವೆ ರಾಜ್ಯಾದ್ಯಂತ: ಫ್ಯಾಕ್ಟರ್ ಥೆರಪಿಯೊಂದಿಗೆ ತುರ್ತು ಸೇವೆಗಾಗಿ 108 ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳ ಮನೆಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಹಿಮೋಫಿಲಿಯಾ ರೋಗಿಗಳಿಗೆ ಮರುಜೀವ ಸಿಕ್ಕಂತಾಗಿದೆ.

ಫಲಶ್ರುತಿ – ಹೋರಾಟಕ್ಕೆ ಸರ್ಕಾರದ ಸ್ಪಂದನೆ :ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯು 2025ರ ಆಗಸ್ಟ್ 10ರಂದು ಕಾವ್ಯ ಬಿ.ಕೆ ಅವರ ವಿಶೇಷ ವರದಿಯನ್ನು ಪ್ರಕಟಿಸುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಅದರ ಫಲವಾಗಿ ಈ ಮಹತ್ವದ ಯೋಜನೆ ಜಾರಿಗೆ ಬಂದಿದೆ. ದೀರ್ಘಕಾಲದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿರುವುದು ಕುಸುಮ ರೋಗಿಗಳ ಪಾಲಿಗೆ ಭರವಸೆಯ ಬೆಳಕಾಗಿದೆ.

ಇದನ್ನೂ ಓದಿ: ಧಾರವಾಡದಲ್ಲಿ ಉಗ್ರಗೊಂಡ ಉದ್ಯೋಗಾಕಾಂಕ್ಷಿಗಳ ಹೋರಾಟ: ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ

“ಹಿಮೋಫಿಲಿಯಾ ರೋಗಿಗಳಿಗೆ ನಾನ್-ಫ್ಯಾಕ್ಟರ್ ಥೆರಪಿ ಅತ್ಯಂತ ಅವಶ್ಯಕ. ಇಷ್ಟು ವರ್ಷದ ಹೋರಾಟಕ್ಕೆ ಕೊನೆಗೂ ಸ್ಪಂದನೆ ದೊರೆತಿದೆ,” ಎಂದು ಪದ್ಮಶ್ರೀ ಪುರಸ್ಕೃತ ಹಾಗೂ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಅಭಿಪ್ರಾಯಪಟ್ಟಿದ್ದಾರೆ.