ದಾವಣಗೆರೆ (ಚಳ್ಳಕೆರೆ): ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಚಳ್ಳಕೆರೆ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮತ್ತೊಮ್ಮೆ ದಾಳಿ ನಡೆಸಿದ್ದು, ದಾಳಿಯಲ್ಲಿ ವೀರೇಂದ್ರ ಪಪ್ಪಿ ಅವರ ಸಾಗರೋತ್ತರ ಹಣಕಾಸು ವ್ಯವಹಾರಗಳು ಮತ್ತು ವಿದೇಶಿ ಶೆಲ್ ಕಂಪನಿಗಳೊಂದಿಗಿನ ಸಂಪರ್ಕಗಳ ಕುರಿತು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.
ಇಡಿ ಅಧಿಕಾರಿಗಳು ಕಳೆದ ಬಾರಿ ಚಳ್ಳಕೆರೆಯಲಿರುವ ವೀರೇಂದ್ರ ಪಪ್ಪಿ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ನಂತರ ಅವರ ಸಹೋದರ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ನಮ್ಮ ಬಳಿ ಎಲ್ಲದಕ್ಕೂ ಸೂಕ್ತ ದಾಖಲೆಗಳಿವೆ. ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ’ ಎಂದು ಹೇಳಿದ್ದರು. ಆದರೆ, ಈ ಬಾರಿ ಇಡಿ ದಾಳಿ ಎರಡನೇ ಬಾರಿಗೆ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ.
ವೀರೇಂದ್ರ ಪಪ್ಪಿ ಅವರು ಶ್ರೀಲಂಕಾ, ನೇಪಾಳ ಮತ್ತು ಜಾರ್ಜಿಯಾದ ಕೆಲವು ಶೆಲ್ ಕಂಪನಿಗಳು ಮತ್ತು ಕ್ಯಾಸಿನೊಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸೈಬರ್ ವಂಚನೆಯಿಂದ ಬಂದ ಹಣವನ್ನು ಕ್ರೆಡಿಟ್ ಕಾರ್ಡ್ ಪಾವತಿಗಳ ಮೂಲಕ ತಮ್ಮ ಕ್ಯಾಸಿನೊಗಳ ನಗದು ಹಣಕ್ಕೆ ಪರಿವರ್ತಿಸುವ ಮೂಲಕ ಕಪ್ಪು ಹಣವನ್ನು ಕಾನೂನುಬದ್ಧ ಆದಾಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ಶಂಕಿಸಿದ್ದಾರೆ.
ಈ ಕುರಿತಂತೆ ದೊರೆತ ದಾಖಲೆಗಳನ್ನು ಆಧರಿಸಿ, ಇಡಿ ಅಧಿಕಾರಿಗಳು ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಹೊರ ಬರುವ ನಿರೀಕ್ಷೆ ಇದೆ.