ದೆಹಲಿ ಭೇಟಿಯ ಫಲಿತಾಂಶದ ಸುಳಿವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್
ದಾವಣಗೆರೆ: ದೆಹಲಿ ಪ್ರವಾಸದ ಕುರಿತು ಮಾಧ್ಯಮಗಳ ಪ್ರಶ್ನೆಗೆ “ಕಾಲವೇ ಉತ್ತರ ಕೊಡುತ್ತದೆ” ಎಂದು ಮುಗುಳ್ನಗುತ್ತಲೇ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಹೇಳಿಕೆ, ವರಿಷ್ಠರ ಭೇಟಿಯ ಫಲಪ್ರದತೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್ ನಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ, “ದೆಹಲಿ ಟೂರ್ ಸಕ್ಸಸ್ ಆಗಿದೆಯೇ?” ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ನೇರ ಉತ್ತರ ನೀಡದೆ, “ಕಾಲವೇ ಉತ್ತರ ಕೊಡುತ್ತದೆ” ಎಂದು ಹೇಳಿ ತಪ್ಪಿಸಿಕೊಂಡರು.
ಇದನ್ನೂ ಓದಿ: ಸಾವಿರ ದಿನಗಳ ಸಾಧನೆ: GDP, GST ಸಂಗ್ರಹದಲ್ಲಿ ಕರ್ನಾಟಕ ದಾಖಲೆ
ಕಪ್ಪು ಬಟ್ಟೆ ಪ್ರದರ್ಶನ ಕುರಿತು ಸ್ಪಷ್ಟನೆ: ಕಾರ್ಯಕ್ರಮದ ವೇಳೆ ಕೆಲವರು ಕಪ್ಪು ಬಟ್ಟೆ ಪ್ರದರ್ಶಿಸಿದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, “ಇದು ರಾಜಕೀಯ ಸಭೆಯಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳಿಗೂ ನ್ಯಾಯ ನೀಡಿದೆ. ಆದರೆ ಇದನ್ನು ಸಹಿಸದವರು ಹೀಗೆ ವರ್ತಿಸುತ್ತಿದ್ದಾರೆ. ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಯದಿಂದ ಇಂತಹ ಪ್ರದರ್ಶನ ಮಾಡಿದ್ದಾರೆ” ಎಂದು ಆರೋಪಿಸಿದರು.
ಪರೋಕ್ಷವಾಗಿ ಭಾರತಿಯ ಜನತಾ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಬಿಜೆಪಿಯವರಿಗೆ ಇದು ತಾಳಲು ಆಗುತ್ತಿಲ್ಲ. ನನಗೆ ಇಲ್ಲಿ ಬರುವ ಮುಂಚೆಯೇ ಈ ವಿಚಾರ ಗೊತ್ತಿತ್ತು” ಎಂದು ಹೇಳಿದರು.
ಇದನ್ನೂ ಓದಿ: ಭರವಸೆ ಪಾಲನೆ ಮುಂದುವರಿಯಲಿದೆ: ಹಾವೇರಿಯಲ್ಲಿ ಸಿಎಂ ಭರವಸೆ
ಕಾಂಗ್ರೆಸ್ ಸರ್ಕಾರದ ಕೊಡುಗೆಗಳ ಉಲ್ಲೇಖ: ಬಂಜಾರ ಹಾಗೂ ಲಂಬಾಣಿ ಸಮುದಾಯಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಡಿಕೆಶಿ, “ಬಂಜಾರ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು, ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಕಾಂಗ್ರೆಸ್ ಸರ್ಕಾರ. ಲಂಬಾಣಿ ಸಮುದಾಯದಲ್ಲಿ ಶೇ.90ರಷ್ಟು ಜನ ಒಳ್ಳೆಯವರೇ ಇದ್ದಾರೆ. ಕೆಲವೇ ಮಂದಿ ಇಂತಹ ನಕಾರಾತ್ಮಕ ಚಟುವಟಿಕೆ ಮಾಡಿದ್ದಾರೆ” ಎಂದು ಹೇಳಿದರು.
ರಾಜಕೀಯ ವಲಯದಲ್ಲಿ ಕುತೂಹಲ: ದೆಹಲಿಯಲ್ಲಿ ನಡೆದ ವರಿಷ್ಠರ ಭೇಟಿ ಮತ್ತು ಬಳಿಕ ನೀಡಿದ ಈ ಪ್ರತಿಕ್ರಿಯೆ, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳ ಸೂಚನೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. “ಕಾಲವೇ ಉತ್ತರ ಕೊಡುತ್ತದೆ” ಎಂಬ ಡಿಕೆಶಿಯ ಹೇಳಿಕೆ ಹಲವು ಅರ್ಥಗಳನ್ನು ಹೊತ್ತುಕೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.























