Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಂತಿಯುತ ಮತದಾನ

ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಂತಿಯುತ ಮತದಾನ

0
2

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಗುರುವಾರ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ ತುರುಸಿನಿಂದ ನಡೆದ ಮತದಾನ, ಬಿಸಿಲಿನ ತಾಪ ಹೆಚ್ಚಾದಂತೆ ನೀರಸವಾಯಿತು. ಮತ್ತೆ ಸಂಜೆಯಾಗುತ್ತಲೇ ಮತಗಟ್ಟೆಗಳೆಲ್ಲ ಮತದಾರರಿಂದ ಭರ್ತಿಯಾದವು.

ಭಾಷನಗರದ ಮಿಲ್ಲತ್ ಮತಗಟ್ಟೆ ಸಮೀಪ ಮತದಾರರು ಪ್ರವೇಶಿಸುವ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದರು. ಇಲ್ಲಿ ಎಸ್‌ಡಿಪಿಐ ಮುಖಂಡರು ಟೇಬಲ್ ಹಾಕಿಕೊಳ್ಳುವ ವಿಚಾರವಾಗಿ ಕಾಂಗ್ರೆಸ್ ಮುಖಂಡರು ಗಲಾಟೆ ತೆಗೆದರು. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಇದೇ ಸಂದರ್ಭದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಕುಕ್ಕರ್ ಚಿಹ್ನೆ ಹಾಗೂ ಕ್ರಮ ಸಂಖ್ಯೆ 4ರ ಕರಪತ್ರ ತೂರಾಡಿದರು. ಕ್ಷೇತ್ರದ ವ್ಯಾಪ್ತಿಯ ಕನಗೊಂಡನಹಳ್ಳಿ ಮತಗಟ್ಟೆ ಕೇಂದ್ರ 265ರಲ್ಲಿ ಅಣಕು ಮತದಾನ ವೇಳೆ ಇವಿಎಂ ಯಂತ್ರದಲ್ಲಿ ದೋಷ ಕಂಡುಬAದಿತು. ಕೂಡಲೇ ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಇದನ್ನು ಹೊರತುಪಡಿಸಿದರೆ, ಬಹುತೇಕ ಕಡೆ ಮತದಾನ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿತು. ಮತಗಟ್ಟೆಗಳ ಮುಂದೆ ಜನರ ಸಾಲು ನೆರೆದಿತ್ತು. ಯುವಜನರ ಜೊತೆಗೆ ಹಿರಿಯರೂ ಉತ್ಸಾಹ ತೋರಿದರು. 80–90 ವಯಸ್ಸು ದಾಟಿದ ವೃದ್ಧರೂ ಇನ್ನೊಬ್ಬರ ಸಹಾಯ ಪಡೆದು ತಮ್ಮ ಹಕ್ಕು ಚಲಾವಣೆಗೆ ಬಂದಿದ್ದರು. ಅಂತಹವರಿಗಾಗಿ ಮತಗಟ್ಟೆಗಳಲ್ಲಿ ವೀಲ್‌ಚೇರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಿಗೆ ಅನತಿ ದೂರದಲ್ಲಿ ನಿಂತಿದ್ದ ಅಭ್ಯರ್ಥಿಗಳು, ಮತ್ತವರ ಬೆಂಬಲಿಗರು ಬಂದ ಮತದಾರರಿಗೆ ಕೈ ಮುಗಿಯುತ್ತಾ ಚಿಹ್ನೆಯ ನೆನೆಪು ಮಾಡಿಕೊಡುತ್ತಾ ಅಲ್ಲಿಯೂ ಮತಯಾಚನೆ ಮಾಡಿದರು.

ಕೆಲವು ಕಡೆ ಮತದಾರರಿಗೆ ಊಟೋಪಚಾರದ ವ್ಯವಸ್ಥೆಯೂ ಇತ್ತು. ವಯಸ್ಸಾದವರನ್ನು ಕರೆದೊಯ್ಯಲು ಆಟೊ, ಕಾರುಗಳ ವ್ಯವಸ್ಥೆಯನ್ನೂ ಅಭ್ಯರ್ಥಿಗಳು ಮಾಡಿದ್ದರು. ಸಂಜೆ 5ರವರೆಗೆ ಮತದಾನ ನಿಗದಿಯಾಗಿದ್ದು, ಕಡೆಯ ಅವಧಿಯಲ್ಲೂ ಕೆಲವರು ಉತ್ಸಾಹದಿಂದ ಬಂದರು. ಹೀಗಾಗಿ ಅಂತಹವರಿಗೆ ಟೋಕನ್ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.