ದಾವಣಗೆರೆ: ಒಂದೆಡೆ ಆರೆಸ್ಸೆಸ್ ಮತ್ತು ಗೋಡ್ಸೆ ಸಿದ್ಧಾಂತಗಳಿದ್ದರೆ, ಮತ್ತೊಂದೆಡೆ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ ಗಾಂಧಿ, ನೆಹರು ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳಿವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಉಪ ಚುನಾವಣೆಯು ಕೇವಲ ವ್ಯಕ್ತಿಗಳ ನಡುವಿನ ಪೈಪೋಟಿಯಲ್ಲ, ಬದಲಾಗಿ ವಿಚಾರಧಾರೆಗಳ ನಡುವಿನ ಸಂಘರ್ಷ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯು ಒಂದು ನಿರ್ದಿಷ್ಟ ವರ್ಗದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಮತ್ತು ಈ ದೇಶದ ಸಂವಿಧಾನ ಶಿಲ್ಪಿಗಳಾದ ಗಾಂಧಿ, ನೆಹರು ಹಾಗೂ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದರು.
ಕೇವಲ ಉಡಾಫೆ ಮಾತುಗಳಿಂದ ಮತ ಕೇಳಲು ಸಾಧ್ಯವಿಲ್ಲ, ಸಿದ್ಧಾಂತಗಳ ಹಿನ್ನೆಲೆಯಲ್ಲಿ ಚರ್ಚೆ ನಡೆಯಬೇಕು. ತಾವು ಮಂಡಿಸುತ್ತಿರುವ ಯಾವುದೇ ವಿಚಾರಗಳನ್ನು ತಪ್ಪು ಎಂದು ಸಾಬೀತುಪಡಿಸಲು ಬಿಜೆಪಿ ಸಿದ್ಧವಿದ್ದರೆ, ಎಂತಹದೇ ಸವಾಲಿಗೂ ಹಾಗೂ ಚರ್ಚೆಗೂ ತಾವು ಸಿದ್ಧರಿರುವುದಾಗಿ ಅವರು ನೇರ ಸವಾಲು ಹಾಕಿದರು.
ದಕ್ಷಿಣ ಭಾಗದ ಮತದಾರರು ಅತ್ಯಂತ ಪ್ರಬುದ್ಧರು ಮತ್ತು ವಿಚಾರವಂತರಾಗಿದ್ದಾರೆ. ಹೀಗಾಗಿ, ಪ್ರಸಕ್ತ ಚುನಾವಣೆಯಲ್ಲಿ ಎಲ್ಲಾ ವರ್ಗದ ಜನರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಹಾಗೂ ಮತ ನೀಡಲಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯು ಅತ್ಯಂತ ಭಾರಿ ಬಹುಮತದೊಂದಿಗೆ ವಿಜಯಶಾಲಿಯಾಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.






















