ದಾವಣಗೆರೆಯಲ್ಲಿ ಚೆಲುವರಾಯಸ್ವಾಮಿ ಕಿಡಿ: “ಕಾಂಗ್ರೆಸ್ ಸರ್ಕಾರ ಕಿತ್ತೊಗಿಯೋಕೆ ಇದು ತುಂಬೆ ಗಿಡನಾ?”
ದಾವಣಗೆರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರಿಂದ ಬರುತ್ತಿರುವ ಟೀಕೆಗಳಿಗೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತೀವ್ರ ಪ್ರತಿಕ್ರಿಯೆ ನೀಡಿದ್ದು, “ಈ ಸರ್ಕಾರವನ್ನು ಕಿತ್ತೊಗಿಯೋಕೆ ಇದೇನೂ ತುಂಬೆ ಗಿಡನಾ?” ಎಂದು ವಾಗ್ದಾಳಿ ನಡೆಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಹಿನ್ನೆಲೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಟೀಕಿಸಿದರು. ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಹಾಗೂ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಮಾಡುತ್ತಿರುವ ಆರೋಪಗಳು ವಾಸ್ತವಕ್ಕೆ ದೂರವಾಗಿವೆ ಎಂದು ಹೇಳಿದರು.
“ರಾಜಕೀಯದಲ್ಲಿ ಟೀಕೆಗಳು ಆರೋಗ್ಯಕರವಾಗಿರಬೇಕು. ಆದರೆ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳು ಯಾವುದೇ ಸತ್ಯಾಧಾರವಿಲ್ಲದೆ, ಕೇವಲ ಅಪಪ್ರಚಾರದ ಮಟ್ಟಕ್ಕೆ ಇಳಿದಿವೆ” ಎಂದು ಅವರು ಆರೋಪಿಸಿದರು.
ಎಚ್.ಡಿ. ಕುಮಾರಸ್ವಾಮಿ ಕುರಿತು ಪ್ರತಿಕ್ರಿಯಿಸಿದ ಸಚಿವರು, “ರಾಜ್ಯದಲ್ಲಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದಿದ್ದರೆ ಈ ರೀತಿಯ ಮಾತುಗಳು ಅರ್ಥಪೂರ್ಣವಾಗುತ್ತಿತ್ತು. ಆದರೆ ಇತರ ಪಕ್ಷಗಳ ಬೆಂಬಲದಿಂದ ರಾಜಕೀಯ ನಡೆಸುತ್ತಿರುವವರು ಈ ರೀತಿಯ ಟೀಕೆ ಮಾಡುವುದು ಸೂಕ್ತವಲ್ಲ” ಎಂದು ತಿರುಗೇಟು ನೀಡಿದರು.
ಇದಲ್ಲದೆ, ಬಿಜೆಪಿ ನಾಯಕರು ಸಾರ್ವಜನಿಕರಿಗೆ ನೀಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಅಥವಾ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡದೆ, ಕೇವಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವುದು ದುರಂತಕರ ಎಂದು ಅವರು ಹೇಳಿದರು. “ಜನರ ಮುಂದೆ ನಾವು ಏನು ಮಾಡಿದ್ದೇವೆ, ಮುಂದೆ ಏನು ಮಾಡುತ್ತೇವೆ ಎಂಬುದನ್ನು ಹೇಳುವ ಬದಲು ಕೇವಲ ‘ಲೂಟಿ ಸರ್ಕಾರ’ ಎಂದು ಹೇಳುವುದರಿಂದ ಮತದಾರರಿಗೆ ನಂಬಿಕೆ ಬರೋದಿಲ್ಲ” ಎಂದು ಕಿಡಿಕಾರಿದರು.
ರಾಜಕೀಯ ನಾಯಕರು ತಮ್ಮ ಸ್ಥಾನಮಾನಕ್ಕೆ ತಕ್ಕ ಭಾಷೆ ಬಳಸಬೇಕು. ವೈಯಕ್ತಿಕ ಟೀಕೆಗಳ ಬದಲು ವಿಷಯಾಧಾರಿತ ಚರ್ಚೆ ನಡೆಸಬೇಕು ಎಂಬುದಾಗಿ ಅವರು ಸಲಹೆ ನೀಡಿದರು.
ಉಪಚುನಾವಣೆ – ಸರ್ಕಾರದ ಮೇಲೆ ಪರಿಣಾಮ ಬೀರಲ್ಲ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಂದಿನ ೨೦೨೮ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಾರೆ. ಯಾವ ದಿಕ್ಸೂಚಿ ಇಲ್ಲ. ಈ ಚುನಾವಣೆಯಿಂದ ಆಡಳಿತದ ಮೇಲಾಗಲಿ ಅಥವಾ ಸರ್ಕಾರದ ಮೇಲಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಕರ್ನಾಟಕದ ಪಂಚ ಗ್ಯಾರಂಟಿ ವಿಶ್ವಕ್ಕೆ ಮಾದರಿ: ನುಡಿದಂತೆ ನಡೆದು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.





















