ಮಂಗಳೂರು: ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಬಡ್ಡಿ ಸ್ಪರ್ಧಿಯಲ್ಲಿ ವಿಶ್ವ ಚಾಂಪಿಯನ್ ಭಾರತ ತಂಡವನ್ನು ಪ್ರತಿನಿಧಿಸಿದ ಸುರತ್ಕಲ್ ಇಡ್ಯಾ ನಿವಾಸಿ ಧನಲಕ್ಷ್ಮಿ ಪೂಜಾರಿ ಅವರನ್ನು ಸುರತ್ಕಲ್ ಇಡ್ಯಾದಲ್ಲಿ ಸನ್ಮಾನಿಸಲಾಯಿತು.
ಇಡ್ಯಾ ಸುರಕ್ಷಾ ಕ್ಯಾಟರರ್ಸ್ ಮಾಲಿಕ ಕೇಶವ ಬಿ. ಸನಿಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಭಕ್ತ ವೇದಿಕೆ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರು, ಧನಲಕ್ಷ್ಮಿ ಪೂಜಾರಿ ಅವರು ಕ್ರೀಡೆಯ ವೇಳೆ ದೈಹಿಕವಾಗಿ ಗಾಯಗೊಂಡರೂ ಪರಿಶ್ರಮದಿಂದ ಮತ್ತೆ ತರಬೇತಿಯನ್ನು ಆರಂಭಿಸಿ ರಾಷ್ಟ್ರೀಯ ಕ್ರೀಡಾ ತಂಡಕ್ಕೆ ಆಯ್ಕೆಯಾಗಿರುವುದು ಸಣ್ಣ ಸಾಧನೆಯಲ್ಲ. ತರಬೇತುದಾರರು, ಪೋಷಕರ ಪ್ರೋತ್ಸಾಹದಿಂದ ದಕ್ಷಿಣ ಭಾರತದ ಏಕೈಕ ಆಟಗಾರ್ತಿಯಾಗಿ ಧನಲಕ್ಷ್ಮಿ ಪೂಜಾರಿ ಅವರು ಆಯ್ಕೆಯಾಗಿ ವಿಶ್ವಚಾಂಪಿಯನ್ ಭಾರತ ತಂಡವನ್ನು ಪ್ರತಿನಿಧಿಸಿರುವುದು ನಮಗೆಲ್ಲ ಹೆಮ್ಮೆಯನ್ನು ಉಂಟುಮಾಡಿದೆ ಎಂದರು.























