ಸುರತ್ಕಲ್: ಸುರತ್ಕಲ್‌ನಲ್ಲಿರುವ ಮಹಾನಗರ ಪೆಟ್ರೋಲಿಯಂ ಸಂಸ್ಥೆಯಾದ ಎಂಆರ್‌ಪಿಎಲ್ (MRPL) ದಿನಕೂಲಿ ಕಾರ್ಮಿಕರಿಗೆ ಪ್ರತಿದಿನ ಒಂದಲ್ಲೊಂದು ನೆಪವೊಡ್ಡಿ ಕಿರುಕುಳ ನೀಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಕಾರ್ಮಿಕರಿಗೆ ನಿಗದಿತ ಒಂದೇ ಗೇಟ್ ಮೂಲಕ ಮಾತ್ರ ಪ್ರವೇಶ ಪಾಸ್ ನೀಡುವ ನಿರ್ಧಾರ ಕೈಗೊಂಡಿರುವುದು, ಸ್ಥಳೀಯ ಬಡ ಕಾರ್ಮಿಕರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂದಿನಂತೆ ತಮ್ಮ ಮನೆಗಳಿಂದ ಅನುಕೂಲಕರವಾದ ಗೇಟ್ ಮೂಲಕ ಕರ್ತವ್ಯಕ್ಕೆ ಹಾಜರಾಗಲು ಬಂದ ಕಾರ್ಮಿಕರನ್ನು, ಇಂದು ಭದ್ರತಾ ಸಿಬ್ಬಂದಿ ಗೇಟ್ ಬಳಿ ತಡೆದು ನಿಲ್ಲಿಸಿದ್ದಾರೆ. ಇದರಿಂದಾಗಿ ಕಾರ್ಮಿಕರು ವಿವಿಧ ಗೇಟ್‌ಗಳ ಮುಂದೆ ನಿಂತು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲಸಕ್ಕೆ ಪ್ರವೇಶ ದೊರೆಯದೆ ತೀವ್ರ ಅಸಮಾಧಾನ ಉಂಟಾಯಿತು.
ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್
ಈ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ಸುಮಾರು 400ಕ್ಕೂ ಹೆಚ್ಚು ದಿನಕೂಲಿ ಕಾರ್ಮಿಕರು ದಿಢೀರ್ ಆಗಿ ಎಂಆರ್‌ಪಿಎಲ್ ಮುಖ್ಯ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳೀಯರಿಗೆ ನೇರ ಉದ್ಯೋಗ ನೀಡದ ಸಂಸ್ಥೆ, ಕಂಪನಿಯಿಂದ ಹೊರಬರುವ ವಿಷಗಾಳಿ ಹಾಗೂ ವಿಷಯುಕ್ತ ನೀರನ್ನು ಅನುಭವಿಸುತ್ತಾ ಬದುಕುತ್ತಿರುವ ಜನರಿಗೆ ಕನಿಷ್ಠ ನ್ಯಾಯ ನೀಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.
ಎಂಆರ್‌ಪಿಎಲ್‌ನಲ್ಲಿ ನೇರ ಉದ್ಯೋಗ ಇಲ್ಲದಿದ್ದರೂ, ಅನೇಕ ಸ್ಥಳೀಯರು ದಿನಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಸಂಸ್ಥೆಯ ಕೆಲವು ಉನ್ನತ ಅಧಿಕಾರಿಗಳು, ಸ್ಥಳೀಯ ಕಾರ್ಮಿಕರನ್ನು ಕ್ರಮೇಣ ಹೊರದಬ್ಬುವ ಉದ್ದೇಶದಿಂದ ಹೊರರಾಜ್ಯದ ಕಾರ್ಮಿಕರನ್ನು ಕಡಿಮೆ ವೇತನಕ್ಕೆ ನೇಮಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ಅಲ್ಲದೆ, ದಿನಕೂಲಿ ಕಾರ್ಮಿಕರು ನಿವೃತ್ತರಾದ ಬಳಿಕ ಹೊಸ ಕಾರ್ಮಿಕರನ್ನು ನೇಮಿಸದೆ, ಈಗಿರುವ ಕಾರ್ಮಿಕರ ಮೇಲೆಯೇ ಹೆಚ್ಚಿನ ಕೆಲಸದ ಒತ್ತಡ ಹೇರಿ ಹೀನಾಯವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಾರ್ಮಿಕರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದ್ದು, ಉಳಿದವರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದ್ದಾರೆ.























