ಸಂ. ಕ. ಸಮಾಚಾರ, ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು ಹಾಗೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರರಾದ ಸತೀಶ್ ಎಂ. ಪ್ರಭು (60) ಅವರು ಮಾರ್ಚ್ 3ರಂದು ನಿಧನರಾದರು.
ಸಂಘನಿಕೇತನ ಸಮೀಪದ ತಮ್ಮ ನಿವಾಸದಲ್ಲಿ ಇದ್ದಾಗ ಏಕಾಏಕಿ ಕುಸಿದು ಬಿದ್ದ ಅವರನ್ನು ತಕ್ಷಣ ಯೆನಪೋಯ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಪರೀಕ್ಷಿಸಿ ಬ್ರೇನ್ ಹೇಮರೇಜ್ ಆಗಿರುವುದಾಗಿ ತಿಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ಹೊತ್ತಿನಲ್ಲಿ ಅವರು ಕೊನೆಯುಸಿರೆಳೆದರು.
ಇದನ್ನೂ ಓದಿ: ಭಾರತಕ್ಕೆ 50 ದಿನಗಳ ತೈಲ ಬಫರ್: ತಕ್ಷಣ ಇಂಧನ ಬೆಲೆ ಏರಿಕೆ ಇಲ್ಲ
ವಿವಿಧ ಹುದ್ದೆಗಳಲ್ಲಿ ಸೇವೆ: ಸತೀಶ್ ಪ್ರಭು ಅವರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾಗಿದ್ದರು. ಅಲ್ಲದೆ ಮಂಗಳೂರು ನಗರ ದಕ್ಷಿಣ ಮಂಡಲದ ಮಾಜಿ ಅಧ್ಯಕ್ಷರಾಗಿಯೂ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಂಘನಿಕೇತನ ಉಪಾಧ್ಯಕ್ಷರಾಗಿಯೂ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸಕ್ರಿಯ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು. ಹತ್ತು ಹಲವು ಸಂಘ-ಸಂಸ್ಥೆಗಳ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ನೇರ, ನಿಷ್ಠ ಮತ್ತು ಪ್ರಾಮಾಣಿಕ ರಾಜಕಾರಣಕ್ಕಾಗಿ ಹೆಸರುವಾಸಿಯಾಗಿದ್ದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣಕ್ಕೆ ವೀಲಿಂಗ್ : ಪೊಲೀಸ್ ಬಲೆಗೆ ಸಿಕ್ಕ ಸವಾರ
ಸರಳ ರಾಜಕೀಯ ಜೀವನ: ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಅನೇಕ ಹಿರಿಯ ನಾಯಕರ ಸಂಪರ್ಕದಲ್ಲಿದ್ದರೂ, ಯಾವುದೇ ಹುದ್ದೆಗಾಗಿ ಲಾಬಿ ಮಾಡದೇ ತತ್ವನಿಷ್ಠ ರಾಜಕಾರಣ ನಡೆಸಿದ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದರು. ಕುದ್ರೋಳಿಯಲ್ಲಿ “ವಿವೇಕಾನಂದ ಪ್ರಿಂಟರ್ಸ್” ಎಂಬ ಸಣ್ಣ ಮುದ್ರಣ ಸಂಸ್ಥೆಯನ್ನು ನಡೆಸುತ್ತಿದ್ದರು. ಅವರು ಪತ್ನಿ ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಜಗಳ ಕೊಲೆಯಲ್ಲಿ ಅಂತ್ಯ
ಗಣ್ಯರ ಸಂತಾಪದ ನುಡಿಗಳು: ಸತೀಶ್ ಪ್ರಭು ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ಪಕ್ಷದ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.













