ಒಮಾನ್‌ನಲ್ಲಿ ಮಂಗಳೂರು ಮೂಲದ ಯುವಕ ಆತ್ಮಹತ್ಯೆ

0
39

ಸಂ. ಕ. ಸಮಾಚಾರ, ಮಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದು ಒಮಾನ್‌ನಲ್ಲಿ ಉದ್ಯೋಗದಲ್ಲಿದ್ದ ಉಳ್ಳಾಲದ ಸೋಮೇಶ್ವರ ಮೂಲದ ಯುವಕನೊಬ್ಬ ಲೈವ್ ವಿಡಿಯೋ ಮಾಡಿ ತನ್ನ ವಸತಿ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಇತ್ತೀಚೆಗೆ ಸಂಬಂಧವನ್ನು ನಿರಾಕರಿಸಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ.

ಮೃತರನ್ನು ಸೋಮೇಶ್ವರದ ಚಂದ್ರ ಮತ್ತು ದೀಪಾ ದಂಪತಿಯ ಹಿರಿಯ ಪುತ್ರ ಪುನೀತ್ ಪೂಜಾರಿ (32) ಎಂದು ಗುರುತಿಸಲಾಗಿದೆ. ಅವರು ಕಳೆದ ಒಂದೂವರೆ ವರ್ಷಗಳಿಂದ ಒಮಾನ್‌ನಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಒಂದೂವರೆ ತಿಂಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ ಅವರು ಬಳಿಕ ಮತ್ತೆ ಒಮಾನ್‌ಗೆ ಮರಳಿದ್ದರು.

ಇದನ್ನೂ ಓದಿ: ಭಾರತಕ್ಕೆ 50 ದಿನಗಳ ತೈಲ ಬಫರ್: ತಕ್ಷಣ ಇಂಧನ ಬೆಲೆ ಏರಿಕೆ ಇಲ್ಲ

ನಾಲ್ಕು ವರ್ಷದ ಪ್ರೀತಿ, ಇತ್ತೀಚಿನ ಅಸಮಾಧಾನ: ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವ ಪ್ರದೇಶದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಅನ್ಯೋನ್ಯವಾಗಿದ್ದ ಜೋಡಿಯಾಗಿ ಹಲವೆಡೆ ಪ್ರವಾಸ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯುವತಿ ಪುನೀತ್ ಅವರ ಕರೆಗಳಿಗೆ ಸ್ಪಂದಿಸದೇ, ಸಂದೇಶಗಳಿಗೂ ಪ್ರತಿಕ್ರಿಯೆ ನೀಡದೇ ಪ್ರೀತಿಯನ್ನು ನಿರಾಕರಿಸುತ್ತಿದ್ದಾಳೆಂಬ ಮಾಹಿತಿ ಲಭ್ಯವಾಗಿದೆ. ಈ ವಿಷಯವಾಗಿ ಅವರು ಸ್ನೇಹಿತರ ಬಳಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾಗಿ ತಿಳಿದುಬಂದಿದೆ.

ಲೈವ್ ವಿಡಿಯೋ ಬಳಿಕ ದಾರುಣ ಅಂತ್ಯ: ಘಟನೆಯ ದಿನ ಪುನೀತ್ ಲೈವ್ ವಿಡಿಯೋ ಮಾಡಿ ಬಳಿಕ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಈ ಘಟನೆ ತಿಳಿದು ಕುಟುಂಬದವರಲ್ಲಿ ಆಘಾತ ಮತ್ತು ದುಃಖ ಆವರಿಸಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಕ್ಕೆ ವೀಲಿಂಗ್ : ಪೊಲೀಸ್ ಬಲೆಗೆ ಸಿಕ್ಕ ಸವಾರ

ಮೃತದೇಹ ಭಾರತಕ್ಕೆ ತರಲು ವಿಳಂಬ ಸಾಧ್ಯತೆ: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧೋನ್ಮಾದದ ವಾತಾವರಣದ ಹಿನ್ನೆಲೆಯಲ್ಲಿ ಒಮಾನ್‌ನ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚುವರಿ ಸಮಯ ಬೇಕಾಗುವ ಸಾಧ್ಯತೆ ಇದೆ. ಇದರಿಂದ ಮೃತದೇಹವನ್ನು ಭಾರತಕ್ಕೆ ತರಲು ವಿಳಂಬವಾಗಬಹುದು ಎಂದು ಕುಟುಂಬದ ಆಪ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಪುನೀತ್ ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.