ಮಂಗಳೂರು: ಮೀನುಗಾರಿಕಾ ಬೋಟ್‌ಗೆ ಲಂಗರು ಹಾಕುವ ವೇಳೆ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಮೀನುಗಾರನೊಬ್ಬ ಸಾವನ್ನಪ್ಪಿದ ದುರ್ಘಟನೆ ಮಂಗಳೂರು ಹಳೆ ಬಂದರ್ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಚತ್ತೀಸ್‌ಘಡ ರಾಜ್ಯದ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮದ ನಿವಾಸಿ ಪ್ರಹ್ಲಾದ್ ಚೌಹಾನ್ (33) ಎಂದು ಗುರುತಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ಉದ್ಯೋಗಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ಅವರು, ಇಲ್ಲಿನ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ: ಜನವರಿ 9ರಿಂದ “ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್”
ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಹಳೆ ಬಂದರ್ ಉಪ್ಪುಧಕ್ಕೆ ಬಳಿ ಲಂಗರು ಹಾಕಲಾಗಿದ್ದ ‘ಹಸನ್ ಅಲ್ ಬಹಾರ್’ ಪರ್ಸಿನ್ ಬೋಟಿಗೆ ಹಗ್ಗ ಕಟ್ಟುವ ಕಾರ್ಯದಲ್ಲಿ ಪ್ರಹ್ಲಾದ್ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಕಾಲು ಜಾರಿ ನಿಯಂತ್ರಣ ತಪ್ಪಿ ಅವರು ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯ ತಕ್ಷಣವೇ ಬೋಟ್‌ನಲ್ಲಿದ್ದ ಇತರ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರಹ್ಲಾದ್ ಅವರನ್ನು ನೀರಿನಿಂದ ಮೇಲಕ್ಕೆ ಎತ್ತಿದರು. ಆದರೆ ಅಷ್ಟರಲ್ಲಿ ಅವರು ಜೀವ ಕಳೆದುಕೊಂಡಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಳ್ಳಾರಿ ಪ್ರಕರಣ: ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ
ಮೃತದೇಹವನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಶವಪರೀಕ್ಷೆ ನಡೆಸಲಾಯಿತು. ಬಳಿಕ ಮೃತ ಪ್ರಹ್ಲಾದ್ ಅವರ ಕುಟುಂಬದ ಮನವಿಯಂತೆ, ವಿಮಾನ ಮೂಲಕ ಅವರ ತವರೂರಿಗೆ ಮೃತದೇಹವನ್ನು ಕಳುಹಿಸಿಕೊಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ದುರ್ಘಟನೆಯಿಂದಾಗಿ ಹಳೆ ಬಂದರ್ ಪ್ರದೇಶದ ಮೀನುಗಾರ ಸಮುದಾಯದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.






















