Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಮಂಗಳೂರು: ಕಾಮಗಾರಿಗಳಿಗೆ ಅನುದಾನ ಕೊರತೆ

ಮಂಗಳೂರು: ಕಾಮಗಾರಿಗಳಿಗೆ ಅನುದಾನ ಕೊರತೆ

0
9

ಯಾವುದೇ ಹೊಸ ನಿಯಮ – ತಂತ್ರಾಂಶ ಜಾರಿಯಾದರೂ ಮೊದಲು ಮಂಗಳೂರಿನಲ್ಲೇ ಪ್ರಯೋಗ – ಇದು ಶಾಪವಾಗಿ ಪರಿಣಮಿಸಿದೆ

ಬೆಂಗಳೂರು / ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಸಮಸ್ಯೆ ವಿಪರೀತವಾಗಿರುವುದು, ಕಳೆದ ಮಳೆಗಾಲದ ಭಾರೀ ಮಳೆಯಿಂದ ನಗರ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದು, ಚರಂಡಿ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಅನುದಾನ ಕೊರತೆ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸರ್ಕಾರದ ವಿರುದ್ಧ ತೀವ್ರವಾಗಿ ಧ್ವನಿ ಎತ್ತಿದ್ದಾರೆ.

ಸದನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಹೊಸ ನಿಯಮ ಅಥವಾ ತಂತ್ರಾಂಶ ಜಾರಿಯಾದರೂ ಅದನ್ನು ಮೊದಲು ಮಂಗಳೂರಿನಲ್ಲೇ ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗುತ್ತದೆ ಎಂಬುದು ಇಲ್ಲಿನ ನಾಗರಿಕರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:  ರಾಜೀನಾಮೆ ಕುರಿತು ಸದನದಲ್ಲಿ ಕೆ.ಜೆ. ಜಾರ್ಜ್‌ ಸ್ಪಷ್ಟನೆ

ಇ-ಖಾತಾ ಹೊಸ ತಂತ್ರಾಂಶದಿಂದ ಜನರಿಗೆ ತೀವ್ರ ತೊಂದರೆ: ಈ ಹಿಂದೆ ಮಂಗಳೂರು ನಗರದಲ್ಲಿ ಜಿಪಿಎಸ್ ಆಧಾರಿತ ಇ-ಖಾತಾ ವ್ಯವಸ್ಥೆ ಜಾರಿಯಲ್ಲಿದ್ದು, ಸ್ಥಳ ಮಾಹಿತಿ (ಲೊಕೇಶನ್) ಸೆರೆಹಿಡಿದು ಸುಲಭವಾಗಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿತ್ತು. ಆದರೆ ಈ ಸರ್ಕಾರ ಹೊಸ ತಂತ್ರಾಂಶವನ್ನು ಜಾರಿಗೆ ತಂದ ಬಳಿಕ ಇ-ಖಾತಾ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ಶಾಸಕರು ಆರೋಪಿಸಿದರು.

ಕಳೆದ ಎರಡು ತಿಂಗಳ ಅವಧಿಯಲ್ಲಿ ನೋಂದಣಿಯಾಗಿರುವ ಇ-ಖಾತಾಗಳ ಸಂಖ್ಯೆಯನ್ನು ಗಮನಿಸಿದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೂ ಸಂಬಂಧಿಸಿದ ಸಚಿವರು ಸದನದಲ್ಲಿ “ಸರ್ವರ್ ಉನ್ನತೀಕರಿಸಲಾಗಿದೆ, ಯಾವುದೇ ಸಮಸ್ಯೆಯಿಲ್ಲ” ಎಂದು ಉತ್ತರಿಸಿರುವುದು ಅತ್ಯಂತ ದುರಂತಕರ ಸಂಗತಿ ಎಂದು ವೇದವ್ಯಾಸ ಕಾಮತ್ ಕಿಡಿಕಾರಿದರು.

ಇದನ್ನೂ ಓದಿ:  UGC ಇಕ್ವಿಟಿ ನಿಯಮಗಳು ‘ವಿಳಂಬವಾದರೂ ಸ್ವಾಗತಾರ್ಹ’ : ಸ್ಟಾಲಿನ್

ಬೀದಿ ದೀಪ, ಒಳಚರಂಡಿ ಕಾಮಗಾರಿಗಳ ನಿರ್ಲಕ್ಷ್ಯ: ನಗರದಲ್ಲಿ ಪಿಪಿಪಿ (PPP) ಮಾದರಿಯಲ್ಲಿ ಅಳವಡಿಸಲಾದ ಬೀದಿ ದೀಪಗಳ ನಿರ್ವಹಣೆಯಲ್ಲೂ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಶಾಸಕರು ಆರೋಪಿಸಿದರು. ಹಳೆಯ ದೀಪಗಳು ದುರಸ್ತಿಯಾಗುತ್ತಿಲ್ಲ, ಹೊಸ ದೀಪಗಳ ಅಳವಡಿಕೆ ಕೂಡ ಸ್ಥಗಿತಗೊಂಡಿದ್ದು, ಇದರಿಂದ ನಗರ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.

ಇನ್ನೂ ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ಬಳಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಈ ಬಗ್ಗೆ ಸ್ಥಳೀಯ ಮಹಿಳೆಯರು ನಿರಂತರವಾಗಿ ದೂರು ನೀಡುತ್ತಿದ್ದಾರೆ. ಈ ಸಮಸ್ಯೆ ಸಚಿವರ ಗಮನಕ್ಕೂ ಹಾಗೂ ವಿಧಾನಸಭೆ ಸ್ಪೀಕರ್ ಅವರ ಗಮನಕ್ಕೂ ಈಗಾಗಲೇ ಬಂದಿದೆ ಎಂದು ಅವರು ಸದನದಲ್ಲಿ ನೆನಪಿಸಿದರು.

ಇದನ್ನೂ ಓದಿ:  ಮಂಗಳೂರು ದಸರಾಕ್ಕೆ ₹5 ಕೋಟಿ ಅನುದಾನ ಘೋಷಿಸಲು ಮನವಿ

ಟ್ರಾಫಿಕ್ ಸಮಸ್ಯೆಯಿಂದ ಜಲಸಿರಿಯ ಕಾಮಗಾರಿಗೆ ವಿಳಂಬ: ನಗರದ ಪ್ರಮುಖ ಭಾಗಗಳಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಇರುವುದರಿಂದ ಜಲಸಿರಿಯ (ಕುಡಿಯುವ ನೀರು) ಕಾಮಗಾರಿಗಳಿಗೆ ಅಗತ್ಯ ವೇಗ ಸಿಗುತ್ತಿಲ್ಲ. ಈ ರೀತಿಯ ಅನೇಕ ಸಮಸ್ಯೆಗಳು ಮಂಗಳೂರು ನಗರದ ಅಭಿವೃದ್ಧಿಗೆ ತಡೆ ಉಂಟುಮಾಡುತ್ತಿವೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ತಕ್ಷಣ ಗಮನ ಹರಿಸಬೇಕು: ಮಂಗಳೂರು ನಗರದ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಿ, ಇ-ಖಾತಾ ವ್ಯವಸ್ಥೆ ಸರಿಪಡಿಸುವುದು, ರಸ್ತೆ, ಚರಂಡಿ, ಒಳಚರಂಡಿ ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಸೂಕ್ತ ಅನುದಾನ ಮತ್ತು ಸ್ಪಷ್ಟ ಕಾರ್ಯಯೋಜನೆ ರೂಪಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಸರ್ಕಾರವನ್ನು ಆಗ್ರಹಿಸಿದರು.

Previous articleಕೌಟುಂಬಿಕ ಕಲಹ: ಮಾವನಿಂದ 4 ತಿಂಗಳ ಗರ್ಭಿಣಿ ಸೊಸೆಯ ಕೊಲೆ
Next articleಅಧಿವೇಶನದ ನಡುವೆ ಪ್ರಧಾನಿ – ಮಾಜಿ ಪ್ರಧಾನಿ ಮಹತ್ವದ ಭೇಟಿ