ದೈವ ನರ್ತನ ವಿವಾದಕ್ಕೆ ಹೊಸ ತಿರುವು: “ನಾನು ಹಿಂದೂ” ಎಂದ ನರ್ತಕ ಸುಶಾಂತ್
ಮಂಗಳೂರು: ಕರಾವಳಿ ಭಾಗದ ದೈವ ನರ್ತನ ಸೇವೆಗೆ ಸಂಬಂಧಿಸಿದ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು, ಆರೋಪಗಳಿಗೆ ಪ್ರತಿಯಾಗಿ ದೈವನರ್ತಕರು ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನ ಬೋಳೂರಿನ ಜಾರಂದಾಯ ದೈವಸ್ಥಾನದಲ್ಲಿ ನಡೆದ ದೈವ ನರ್ತನ ಸೇವೆ ಕುರಿತು ಡಾ. ರತಿ ಅವರು ಮಾಡಿದ್ದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ದೈವನರ್ತಕ ಸೂರಜ್ ಚಿಪ್ಪಾರು, “ನರ್ತನ ಸೇವೆ ಸಲ್ಲಿಸಿದ ಸುಶಾಂತ್ ಬಂಗೇರ ಪಂಬದ ಸಮುದಾಯಕ್ಕೆ ಸೇರಿದ ಹಿಂದೂ ವ್ಯಕ್ತಿಯಾಗಿದ್ದು, ಈ ಬಗ್ಗೆ ಜಾತಿ ಪ್ರಮಾಣಪತ್ರ ಸೇರಿದಂತೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿದರು.
ವಿವಾದದ ಹಿನ್ನೆಲೆ: ಡಾ. ರತಿ ಅವರು, ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ ಸೇರಿದಂತೆ ನಿರ್ದಿಷ್ಟ ಸಮುದಾಯದವರೇ ಮಾಡಬೇಕು. ಆದರೆ ಇಲ್ಲಿ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ಸೇವೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪದಿಂದ ಕರಾವಳಿ ಭಾಗದಲ್ಲಿ ಚರ್ಚೆ ಜೋರಾಗಿತ್ತು.
ದೈವನರ್ತಕರ ಸ್ಪಷ್ಟನೆ: ಸೂರಜ್ ಚಿಪ್ಪಾರು ಅವರು ಈ ಕುರಿತು ಮಾತನಾಡಿ ಸುಶಾಂತ್ ಬಂಗೇರ ಹಿಂದೂ ಧರ್ಮಕ್ಕೆ ಸೇರಿದವನು, ಪಂಬದ ಸಮುದಾಯದವರಾಗಿರುವುದು ದಾಖಲೆಗಳಿಂದ ದೃಢವಾಗಿದೆ. ಯಾವುದೇ ಸಂಪ್ರದಾಯ ಉಲ್ಲಂಘನೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಕುಟುಂಬ ಹಿನ್ನೆಲೆ ವಿವರಣೆ: ಈ ವೇಳೆ ಗಣೇಶ್ ಪಂಬದ ಅವರು, “ಕ್ರಿಶ್ಚಿಯನ್ ಮಹಿಳೆಯೊಂದಿಗೆ ಮದುವೆಯಾಗಿದ್ದರೂ, ಅವರು ಹಿಂದೂ ಸಂಪ್ರದಾಯವನ್ನು ಸ್ವೀಕರಿಸಿ ಪಂಬದ ಜಾತಿಯ ಆಚರಣೆಗಳನ್ನು ಪಾಲಿಸಿಕೊಂಡಿದ್ದಾರೆ. ಆ ಬಳಿಕ ಜನಿಸಿದ ಸುಶಾಂತ್ ಪಂಬದ ಕಾನೂನುಬದ್ಧವಾಗಿ ಎಲ್ಲಾ ದಾಖಲೆಗಳನ್ನು ಹೊಂದಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ದೈವ ಸೇವೆಯ ಬಗ್ಗೆ ಪ್ರತಿಕ್ರಿಯೆ: “ಜಾರಂದಾಯ ದೈವಸ್ಥಾನದಲ್ಲಿ ನಡೆದ ದೈವ ನರ್ತನ ಸೇವೆ ಶ್ರದ್ಧಾಭಕ್ತಿಯಿಂದ ಯಾವುದೇ ಲೋಪದೋಷವಿಲ್ಲದೆ ನಡೆದಿದೆ. ದೈವೀ ಅಪ್ಪಣೆಯಂತೆ ಎಲ್ಲಾ ವಿಧಿ ವಿಧಾನಗಳು ನೆರವೇರಿವೆ” ಎಂದು ಗಣೇಶ್ ಪಂಬದ ತಿಳಿಸಿದ್ದಾರೆ. ಅವರು ಕಳೆದ 31 ವರ್ಷಗಳಿಂದ ವಿವಿಧ ಸೀಮೆಗಳಲ್ಲಿ ದೈವ ನರ್ತನ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಸುಶಾಂತ್ ಬಂಗೇರ ಆಕ್ರೋಶ: ದೈವನರ್ತಕ ಸುಶಾಂತ್ ಬಂಗೇರ, “ನನ್ನನ್ನು ಕ್ರೈಸ್ತ ಧರ್ಮಕ್ಕೆ ಸೇರಿದವನು ಎಂದು ತಪ್ಪಾಗಿ ಆರೋಪಿಸಿ ಅವಮಾನ ಮಾಡಲಾಗಿದೆ. ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಈ ರೀತಿಯ ಆರೋಪಗಳು ನನ್ನ ಭವಿಷ್ಯಕ್ಕೆ ಧಕ್ಕೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.























