MCF ಹೆಸರು ಬದಲಾವಣೆಯಿಂದ ಮಂಗಳೂರಿನ ಅಸ್ಮಿತೆಗೆ ಧಕ್ಕೆ

0
2

ತಕ್ಷಣ ಹಳೆಯ ಹೆಸರೇ ಮರುಸ್ಥಾಪನೆ ಆಗ್ರಹ – ಐವನ್ ಡಿಸೋಜ

ಮಂಗಳೂರು: ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಎಂಬ ಐತಿಹಾಸಿಕ ಹೆಸರನ್ನು ಪ್ಯಾರಾದೀಪ್ ಪಾಸ್ಫೇಟ್ಸ್ ಲಿಮಿಟೆಡ್ ಎಂದು ಬದಲಾಯಿಸಿರುವ ಕ್ರಮವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮ ಮಂಗಳೂರಿನ ಅಸ್ಮಿತೆಗೆ ಧಕ್ಕೆ ತಂದಿದ್ದು, ಕೂಡಲೇ ಎಂಸಿಎಫ್ ಹೆಸರನ್ನೇ ಮರುಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐವನ್ ಡಿಸೋಜ, ಎಂಸಿಎಫ್ ಹೆಸರು ಮರುಸ್ಥಾಪನೆಯ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಆಡಳಿತ ವರ್ಗ ಸ್ಪಂದಿಸದಿದ್ದರೆ, ನಾನೇ ಖುದ್ದಾಗಿ ಕಾರ್ಖಾನೆಗೆ ತೆರಳಿ ಹೊಸ ನಾಮಫಲಕವನ್ನು ತೆರವುಗೊಳಿಸುತ್ತೇನೆ ಎಂದು ಎಚ್ಚರಿಸಿದರು. ಅಲ್ಲದೆ, ಈ ಕಾರ್ಖಾನೆಗೆ ನೀರು ಪೂರೈಕೆ ಮಾಡುವ ವಿಚಾರದಲ್ಲೂ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಮುಂದಿನ ಹಂತದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಉದ್ದೇಶವಿದ್ದು, ಪರಿಸ್ಥಿತಿ ಅಂಥದಾಗದಂತೆ ಆಡಳಿತ ಜಾಗೃತರಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವೀನ್ ಪಕ್ಕಾ!

1971ರಲ್ಲಿ ಜಂಟಿ ಉದ್ಯಮವಾಗಿ ಅಸ್ತಿತ್ವಕ್ಕೆ ಬಂದ ಎಂಸಿಎಫ್ ಕಾರ್ಖಾನೆ ಇದೀಗ 55 ವರ್ಷಗಳ ಇತಿಹಾಸ ಹೊಂದಿದೆ. ಈ ಪೈಕಿ 15 ವರ್ಷ ಸರ್ಕಾರಿ ಒಡೆತನದಲ್ಲಿದ್ದು, 35 ವರ್ಷ ಖಾಸಗಿ ವಲಯದ ಕೈಯಲ್ಲಿದ್ದರೂ ‘ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ’ ಎಂಬ ಹೆಸರು ಎಂದಿಗೂ ಬದಲಾಗಿರಲಿಲ್ಲ. ಈ ಕಾರ್ಖಾನೆಗೆ ಭೂಮಿ ನೀಡಿದ್ದು ಮಂಗಳೂರಿನ ಜನತೆ. ಕಾರ್ಖಾನೆಯ ಹಿಂದೆ ಸ್ಥಳೀಯರ ತ್ಯಾಗ, ಶ್ರಮ ಮತ್ತು ಭಾವನಾತ್ಮಕ ಸಂಬಂಧ ಇದೆ. ಕಾರ್ಖಾನೆಗೆ ಬಳಸುವ ನೀರು ಕೂಡ ಇಲ್ಲಿನದೇ. ಹೀಗಿರುವಾಗ ಏಕಾಏಕಿ ಹೆಸರು ಬದಲಾವಣೆ ಮಾಡಿರುವುದು ಮಂಗಳೂರಿನ ಅಸ್ಮಿತೆಯನ್ನು ಪ್ರಶ್ನಿಸಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯವನ್ನು ವಿಧಾನ ಪರಿಷತ್‌ನಲ್ಲಿಯೂ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆಯುವುದಾಗಿ ಐವನ್ ಡಿಸೋಜ ತಿಳಿಸಿದರು. 1991ರಲ್ಲಿ ಎಂಸಿಎಫ್ ಆಡಳಿತವನ್ನು ಯುಬಿ ಕಂಪೆನಿಗೆ ನೀಡಲಾಗಿದ್ದು, 2015ರಲ್ಲಿ ಬಿರ್ಲಾ ಗ್ರೂಪ್‌ಗೆ ವರ್ಗಾಯಿಸಲಾಯಿತು. ನಂತರ ಝುವಾರಿ, ಪಿಪಿಎಲ್ ಮತ್ತು ಎಂಸಿಎಫ್ ಒಡೆತನ ಹೊಂದಿದ್ದ ಅಡ್ವೆಂಝ್ಸ್ ಗ್ರೂಪ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಎರಡು ರಸಗೊಬ್ಬರ ಕಂಪೆನಿಗಳನ್ನು ಪ್ಯಾರಾದೀಪ್ ಪಾಸ್ಫೇಟ್ಸ್ ಜತೆ ವಿಲೀನಗೊಳಿಸಿತು. ಇದರೊಂದಿಗೆ ಎಂಸಿಎಫ್ ಎಂಬ ಐತಿಹಾಸಿಕ ಹೆಸರು ಕಣ್ಮರೆಯಾಗಿದ್ದು, ಇದು ದುರ್ಬಾಗ್ಯಕರ ಬೆಳವಣಿಗೆ ಎಂದು ಅವರು ಹೇಳಿದರು.

ಇದನ್ನೂ ಓದಿ: AI ಲೋಕದಲ್ಲಿ ‘ದೇವರ’ ದರ್ಶನ : ಕ್ರೇಜಿ ಸ್ಟಾರ್ ಒನ್ ಮ್ಯಾನ್ ಶೋ

1990ರಲ್ಲಿ ಎಂಸಿಎಫ್‌ನಲ್ಲಿ ಸುಮಾರು ಒಂದು ಸಾವಿರ ಕಾಯಂ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಆ ಸಂಖ್ಯೆ 450ಕ್ಕೆ ಇಳಿದಿದೆ. ಸ್ಥಳೀಯರಿಗೆ ಮೀಸಲಾಗಿದ್ದ ಉದ್ಯೋಗಗಳು ಕ್ರಮೇಣ ಹೊರ ಪ್ರದೇಶದವರಿಗೆ ಹೋಗುತ್ತಿವೆ ಎಂಬ ಆರೋಪವನ್ನೂ ಐವನ್ ಡಿಸೋಜ ಮುಂದಿಟ್ಟರು.

ಎಂಸಿಎಫ್ ಹೆಸರಿನ ಜತೆ ಮಂಗಳೂರಿನ ಜನತೆ ಕಳೆದ ಐದು ದಶಕಗಳಿಂದ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ. ವಿಲೀನದ ಹೆಸರಿನಲ್ಲಿ ಕಾರ್ಖಾನೆಯ ಹೆಸರನ್ನೇ ತಮ್ಮ ಇಚ್ಛೆಯಂತೆ ಬದಲಿಸುವುದನ್ನು ಮಂಗಳೂರು ಜನತೆ ಯಾವತ್ತೂ ಒಪ್ಪುವುದಿಲ್ಲ. ಈಗಾಗಲೇ 500ಕ್ಕೂ ಹೆಚ್ಚು ಮಾಜಿ ಉದ್ಯೋಗಿಗಳು ಒಂದಾಗಿ ಎಂಸಿಎಫ್ ಹೆಸರು ಉಳಿಸುವ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಕೂಡಲೇ ಕಾರ್ಖಾನೆಯ ಆಡಳಿತ ವರ್ಗ ಸ್ಥಳೀಯ ಜನರ ಆಶೋತ್ತರಗಳಿಗೆ ಸ್ಪಂದಿಸಿ ಎಂಸಿಎಫ್ ಹೆಸರನ್ನೇ ಮರುಸ್ಥಾಪಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಐವನ್ ಡಿಸೋಜ ಎಚ್ಚರಿಸಿದರು.

ಇದನ್ನೂ ಓದಿ: ಮೈಸೂರು: RFO ಕಾಂತರಾಜ್ ಚೌಹಾಣ್ ಅನುಮಾನಾಸ್ಪದ ಸಾವು

ಸುದ್ದಿಗೋಷ್ಠಿಯಲ್ಲಿ ಎಂಸಿಎಫ್‌ನ ಮಾಜಿ ಉದ್ಯೋಗಿಗಳಾದ ಮ್ಯಾಕ್ಸಿಮ್ ಆಲ್ಫ್ರೆಡ್ ಡಿಸೋಜ, ಮೊಹಮ್ಮದ್ ಅಲಿ, ಶಾಹಿಲ್ ಹಮೀದ್ ಹಾಗೂ ಎಂಸಿಎಫ್ ವರ್ಕರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿ.ಕೆ. ಉಪಸ್ಥಿತರಿದ್ದರು.

Previous articleನಿಜವಾದ ಮತದಾರರಿಗೆ ಅನ್ಯಾಯವಾಗಬಾರದು: ಸಿಎಂ ಸಿದ್ದರಾಮಯ್ಯ