ಸಂ. ಕ. ಸಮಾಚಾರ, ಮಂಗಳೂರು: ಯೆಯ್ಯಾಡಿ ಬಾರೆಬೈಲ್‌ನಲ್ಲಿ ನಡೆದ ಹರಕೆ ನೇಮ ವಿವಾದಕ್ಕೆ ಸಂಬಂಧಿಸಿ ವೈಯಕ್ತಿಕವಾಗಿ ಕ್ಷೇತ್ರ, ದೈವ ಹಾಗೂ ಆಡಳಿತ ಮಂಡಳಿ ಬಗ್ಗೆ ಎಲ್ಲಿಯೂ ಸ್ವರ ಎತ್ತಿಲ್ಲ. ದೈವಾರಾಧನೆಯ ಸಂದರ್ಭ ಕಂಡುಬರುವ ಲೋಪದೋಷಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ದೈವಾರಾಧಕ ತಮ್ಮಣ್ಣ ಶೆಟ್ಟಿ ಹೇಳಿದರು.
ಬಾರೆಬೈಲ್‌ನ ಜಾರಂದಾಯ ಬಂಟ ದೈವಸ್ಥಾನದಲ್ಲಿ ಹೊಂಬಾಳೆ ತಂಡ ಇತ್ತೀಚೆಗೆ ಹರಕೆ ನೇಮ ನೀಡಿದ ಕುರಿತಂತೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ತನ್ನ ಮೇಲೆ ತಪ್ಪು ಆರೋಪ ಮಾಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ನನ್ನ ವಿರುದ್ಧ ಕಳ್ಳತನದ ಆರೋಪ ತಪ್ಪು ಮಾಹಿತಿಯಾಗಿದೆ. ಈ ಬಗ್ಗೆ ಯಾವುದೇ ದಾಖಲೆ ಇದ್ದರೆ ನೀಡಲಿ. ಆರೋಪ ಮಾಡಿದವರು ನನ್ನ ವಿರುದ್ಧದ ಆರೋಪವನ್ನು ಸಾಬೀತುಪಡಿಸಲಿ ಎಂದರು.
ಇದನ್ನೂ ಓದಿ: ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಹಾಡು ರಿಲೀಸ್
ದೈವಾರಾಧನೆಯ ಕುರಿತಂತೆ ನಡೆಯುತ್ತಿರುವ ಅಪಪ್ರಚಾರದ ಕುರಿತಂತೆ ಬಾರೆಬೈಲ್ ದೈವಸ್ಥಾನದಲ್ಲಿ ಇತ್ತೀಚೆಗೆ ಪ್ರಾರ್ಥನೆ ಸಲ್ಲಿಕೆಯಾಗಿದ್ದು, ಇಂತಹ ಕಾರ್ಯಗಳು ಪ್ರತಿ ಗ್ರಾಮದಲ್ಲಿಯೂ ನಡೆಯಬೇಕಾಗಿದೆ. ಜಾರಂದಾಯ ಕ್ಷೇತ್ರವನ್ನು ಪ್ರತಿಷ್ಠೆ, ಪ್ರಶಸ್ತಿಗಾಗಿ ದುರುಪಯೋಗ ಮಾಡಿರುವುದು, ಅಪಪ್ರಚಾರ ಮಾಡಿರುವುದು ಯಾರೆಂದು ಸ್ಪಷ್ಟವಾಗಬೇಕಿದೆ.
ದೈವದ ಕ್ಷೇತ್ರದಲ್ಲಿ ಏರು ದನಿಯಲ್ಲಿ ಮಾತನಾಡಬಾರದು. ಕಾರಣಿಕದ ಸ್ಥಳದಲ್ಲಿ ಸುಳ್ಳು ಸಂದೇಶ ನೀಡಬಾರದು. ತೆಂಬರೆ ಕೋಲಿನಿಂದ ದೌರ್ಜನ್ಯ ಎಸಗಬಾರದು. ಆದರೆ ಅದೆಲ್ಲವೂ ಆ ಕ್ಷೇತ್ರದಲ್ಲಿ ನಡೆದಿದೆ ಎಂದು ಅವರು ಆಕ್ಷೇಪಿಸಿದರು. ದೈವಾರಾಧನೆಯ ಇತಿಹಾಸದಲ್ಲಿ ದೈವ ಸಂಬಂಧಿತ ಪ್ರಾರ್ಥನೆ ಮಾತೃಭಾಷೆಯಾದ ತುಳುವಿನಲ್ಲಿಯೇ ಆಗಬೇಕು. ಆದರೆ ಹರಕೆ ನೇಮದ ವೇಳೆ ಕನ್ನಡದಲ್ಲಿ ನಡೆದಿದೆ.
ಚಲನಚಿತ್ರ ನಟರಿಗಾಗಿ ನಿಯಮಗಳನ್ನು ಮುರಿದು ಹರಕೆ ನೇಮ ಮಾಡುವುದು, ಅವರಿಗೆ ಬೇಕಾದ ಭಾಷೆಯಲ್ಲಿ ನುಡಿ ಹೇಳುವುದು ನಡೆಯುತ್ತಾ ಸಾಗಿದರೆ ಮುಂದೆ ತುಳುನಾಡಿನ ನಂಬಿಕೆಯ ದೈವಾರಾಧನೆ ಪ್ಯಾನ್ ಇಂಡಿಯಾ ಆಗಿ ಬದಲಾಗುವ ಆತಂಕವಿದೆ. ದೈವಾರಾಧನೆಯಲ್ಲಿ ಮಾಂತ್ರಿಕ ದೃಷ್ಟಿ ಇರದೆ ಕಾರಣಿಕದ ದೃಷ್ಟಿ ಹೊಂದಿರಬೇಕು. ದೈವಾರಾಧನೆಯನ್ನು ವ್ಯಾಪಾರ, ವ್ಯವಹಾರಕ್ಕೆ ಬಳಸಬಾರದು. ಸಂಪ್ರದಾಯ ಮುರಿಯದೆ ದೈವಾರಾಧನೆಯನ್ನು ಮುಂದುವರಿಸಬೇಕೆಂಬುದು ನನ್ನ ಕಳಕಳಿಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ʻ45′ ಸಿನಿಮಾ ಟ್ರೇಲರ್ ಬಿಡುಗಡೆಗೆ 7 ಕಡೆ ಸ್ಥಳ ನಿಗದಿ
ತುಳುನಾಡಿನಲ್ಲಿ ದೈವಾರಾಧನೆಗೆ ಅನ್ಯ ಧರ್ಮೀಯರಿಂದ ಯಾವುದೇ ಅಪಪ್ರಚಾರ ನಡೆದಿಲ್ಲ. ಬದಲಾಗಿ ಇಲ್ಲಿನ ಕ್ರೈಸ್ತರು, ಮುಸಲ್ಮಾನರನ್ನು ಒಳಗೊಂಡು ಇಲ್ಲಿನ ದೈವಾರಾಧನೆಗಳು ನಡೆಯುತ್ತಿವೆ. ಹಾಗಾಗಿ ಧರ್ಮಗಳ ನಡುವೆ ಎತ್ತಿಕಟ್ಟುವ ಕೆಲಸ ಬೇಡ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಆಧುನಿಕತೆ, ಪ್ರಚಾರದ ಭರದಲ್ಲಿ ತುಳುನಾಡಿನ ಅಸ್ಮಿತೆಯಾದ ದೈವರಾಧಾನೆಯ ಕಟ್ಟುಕಟ್ಟಳೆಗಳು, ನಿಯಮಗಳನ್ನು ಮೀರಿ ವರ್ತಿಸಲಾಗುತ್ತಿದೆ. ಮೌಖಿಕವಾಗಿ ನಡೆದುಕೊಂಡು ಬಂದಿರುವ ದೈವಾರಾಧನೆಯೆಂಬ ನಂಬಿಕೆಯ ಸತ್ವವನ್ನು ಉಳಿಸುವ ಕೆಲಸ ಮುಂದಿನ ಪೀಳಿಗೆಗೆ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅನಾದಿಯಿಂದ ನಡೆದುಕೊಂಡು ಬಂದ ಪದ್ದತಿಯಂತೆ ದೈವದ ಪ್ರತಿಷ್ಠೆ, ನೇಮಗಳು ನಡೆಯಬೇಕು ಎಂದು ಹೇಳಿದರು.






















