ಬೆಳ್ತಂಗಡಿ: ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಅಪಹರಣಕ್ಕೆ ಯತ್ನಿಸಿದ ಆತಂಕಕಾರಿ ಘಟನೆ ಬೆಳ್ತಂಗಡಿ ಪಟ್ಟಣದ ಸುದೇಮುಗೇರು ಪ್ರದೇಶದಲ್ಲಿ ನಡೆದಿದೆ.
ಸುದೇಮುಗೇರು ನಿವಾಸಿಯಾಗಿರುವ ವಿದ್ಯಾರ್ಥಿನಿ ಎಂದಿನಂತೆ ಫೆಬ್ರವರಿ 9ರಂದು ಬೆಳಗ್ಗೆ ಸುಮಾರು 8.30ರ ವೇಳೆಗೆ ಸ್ಕೂಟರ್‌ನಲ್ಲಿ ಸಂತೆಕಟ್ಟೆ ಬಸ್ ನಿಲ್ದಾಣದ ಕಡೆಗೆ ತೆರಳುತ್ತಿದ್ದರು. ಈ ವೇಳೆ ನಂಬರ್ ಪ್ಲೇಟ್‌ಗೆ ಬಟ್ಟೆ ಕಟ್ಟಿದ್ದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಆಕೆಯ ದಾರಿಗೆ ಅಡ್ಡಬಂದು ಕಾರಿನೊಳಗೆ ಎಳೆದು ಅಪಹರಿಸಲು ಯತ್ನಿಸಿದ್ದಾರೆ.
ಇದನ್ನೂ ಓದಿ: METRO ದರ ಏರಿಕೆ ವಿರುದ್ಧ ಖಾಲಿ ಟ್ರಂಕ್ ಹಿಡಿದು ತೇಜಸ್ವಿ ಪ್ರತಿಭಟನೆ
ಅಪರಿಚಿತರು ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕಾರಿನೊಳಗೆ ಸೇರಿಸಲು ಯತ್ನಿಸಿದಾಗ, ಆಕೆ ಬೊಬ್ಬೆ ಹೊಡೆದು ವಿರೋಧ ವ್ಯಕ್ತಪಡಿಸಿ ತೀವ್ರವಾಗಿ ಹೋರಾಟ ನಡೆಸಿದ್ದಾರೆ. ಈ ವೇಳೆ ಹಿಂಭಾಗದಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಆತಂಕಗೊಂಡು, ತಮ್ಮ ಕೈಯಲ್ಲಿದ್ದ ಚೂರಿಯಿಂದ ವಿದ್ಯಾರ್ಥಿನಿಯ ಕೈ ಹಾಗೂ ಬೆರಳಿಗೆ ಗಾಯಗೊಳಿಸಿ, ಆಕೆಯ ಕಾಲೇಜು ಬ್ಯಾಗ್‌ನ್ನು ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟ ‘ಯಾರೇ ನೀನು ಚೆಲುವೆ’ ನಟಿ
ಘಟನೆಯ ಮಾಹಿತಿ ದೊರಕಿದ ತಕ್ಷಣ ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅಪರಿಚಿತ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ತನಿಖೆ ಚುರುಕುಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಹಾಗೂ ವಾಹನದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ಸಾರ್ವಜನಿಕರು ಗಂಭೀರ ಚಿಂತೆ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಹಾಗೂ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಪೋಷಕರು ಕೂಡ ತಮ್ಮ ಮಕ್ಕಳ ಸಂಚಾರದ ಬಗ್ಗೆ ಹೆಚ್ಚು ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.























