ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ)ಯಲ್ಲಿ ಸುಮಾರು ₹40 ಕೋಟಿ ಠೇವಣಿ ಹಣವನ್ನು ವಾಪಸ್ ನೀಡದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಆರಂಭವಾಗಿದೆ.
ಮಾರ್ಚ್ 17ರಂದು Crime Investigation Department (ಸಿಐಡಿ) ತಂಡ ಬೆಂಗಳೂರಿನಿಂದ ಆಗಮಿಸಿ ಪ್ರಕರಣದ ಪರಿಶೀಲನೆ ನಡೆಸಿದೆ.
ಈ ಪ್ರಕರಣದ ಕುರಿತು 2025ರ ಮೇ 22ರಂದು 13 ಮಂದಿ ನೊಂದವರು ದೂರು ನೀಡಿದ್ದು, 14 ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ವರ್ಗಾಯಿಸಿ, ಬಳಿಕ ಸಿಐಡಿಗೆ ಹಸ್ತಾಂತರಿಸಲಾಗಿತ್ತು.
2021ರಿಂದ 2024ರವರೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಜವಾಬ್ದಾರಿಯಲ್ಲಿ ಇದ್ದ ಸುಮಾರು ₹40 ಕೋಟಿ ಹಣವನ್ನು ವಾಪಸ್ ನೀಡದೇ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಸ್ತುತ ಸಿಐಡಿ ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.























