ಮಂಗಳೂರು: ತಣ್ಣೀರುಬಾವಿ ಬೀಚ್‌ನಲ್ಲಿ ಕ್ರೀಡೆ, ಶಿಕ್ಷಣ ಹಾಗೂ ಮನರಂಜನೆಯ ಸಂಗಮವಾಗಿರುವ “ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ – 2026” ಜನವರಿ 9ರಿಂದ 11ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ದೇಶದ ಅತ್ಯಂತ ವೈವಿಧ್ಯಮಯ ಕ್ರೀಡಾ, ಅಥ್ಲೆಟಿಕ್ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲೊಂದಾದ ಮಂಗಳೂರು ಟ್ರಯಾಥ್ಲಾನ್, ಮಂಗಳೂರು ಬೀಚ್ ಮ್ಯಾರಥಾನ್ ಹಾಗೂ ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ನ ನಾಲ್ಕನೇ ಆವೃತ್ತಿಯಿದು ಎಂದು ತಪಸ್ಯಾ ಫೌಂಡೇಶನ್ ಸಂಸ್ಥಾಪಕಿ ಸಬಿತಾ ಆರ್. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಕ್ಕಳಿಗೆ ನೌಕಾದಳದ ಮಾಹಿತಿ: ಈ ಬಾರಿ ಮಂಗಳೂರು ಟ್ರಯಾಥ್ಲಾನ್ ಮತ್ತು ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ 2026 ಅನ್ನು ಅತ್ಯಂತ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿ ರೂಪಿಸಲಾಗಿದ್ದು, ದೇಶ-ವಿದೇಶಗಳಿಂದ 5,000ಕ್ಕೂ ಹೆಚ್ಚು ಅಥ್ಲೀಟ್‌ಗಳು ಭಾಗವಹಿಸುವ ನಿರೀಕ್ಷೆಯಿದೆ. ಭಾರತೀಯ ಸೈನ್ಯದ 150ಕ್ಕೂ ಹೆಚ್ಚು ಅಥ್ಲೀಟ್‌ಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಭಾರತೀಯ ನೌಕಾದಳದ ವಿಶೇಷ ಸ್ಟಾಲ್ ತೆರೆಯಲಾಗಿದ್ದು, ಮಕ್ಕಳಿಗೆ ನೌಕಾದಳದ ಕುರಿತು ಮಾಹಿತಿ ನೀಡುವ ಜೊತೆಗೆ ಸೇನೆಗೆ ಸೇರಲು ಪ್ರೇರಣೆ ನೀಡಲಾಗುತ್ತದೆ.
ಇದನ್ನೂ ಓದಿ: ಬಳ್ಳಾರಿ ಪ್ರಕರಣ: ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ
ಸ್ಟಾರ್ಟಪ್‌ಗಳ ಉತ್ಪನ್ನಗಳಿಗೆ ಮಾರ್ಗದರ್ಶನ: ಮೂರು ದಿನಗಳ ಕಾಲ ನಡೆಯುವ ಈ ಫೆಸ್ಟಿವಲ್‌ನಲ್ಲಿ ಮಕ್ಕಳು ಹಾಗೂ ಪೋಷಕರು ಕ್ರೀಡಾ ಸ್ಪರ್ಧೆಗಳೊಂದಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. ಈ ಸಂದರ್ಭ ಅಲ್ ಕಾರ್ಗೋ ಇಮರ್ಜ್ ಸ್ಟಾರ್ಟಪ್ ಕಾಂಕ್ಲೇವ್ ಆಯೋಜಿಸಲಾಗುತ್ತಿದ್ದು, ಸ್ಟಾರ್ಟಪ್‌ಗಳ ನೂತನ ಉತ್ಪನ್ನಗಳಿಗೆ ಮಾರ್ಗದರ್ಶನ, ಹೂಡಿಕೆದಾರರ ಸಂಪರ್ಕ ಮತ್ತು ವಿಸ್ತರಣೆಗೆ ವೇದಿಕೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಆಯೋಜಕರಲ್ಲಿ ಒಬ್ಬರಾದ ನವೀನ್ ಹೆಗ್ಡೆ, “ಜನವರಿ 9ರಂದು ಸಂಜೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಜನವರಿ 10ರಂದು ಸೈಕ್ಲಿಂಗ್ ಮತ್ತು ಡುಯೆತ್ಲಾನ್ ಸ್ಪರ್ಧೆಗಳು, ಜನವರಿ 11ರಂದು ರನ್ನಿಂಗ್, ಸ್ವಿಮ್ಮಿಂಗ್ ಮತ್ತು ಸೈಕ್ಲಿಂಗ್ ಒಳಗೊಂಡ ಟ್ರಯಾಥ್ಲಾನ್ ನಡೆಯಲಿದೆ. ಕಳೆದ ಬಾರಿ ಯಶಸ್ವಿಯಾಗಿದ್ದಂತೆ ಈ ಬಾರಿಯೂ ಬೀಚ್ ಕುಸ್ತಿ ಪಂದ್ಯಾಟ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಾವಂತ ಯುವಕರಿಗೆ ರಾಷ್ಟ್ರೀಯ ತಂಡ ಹಾಗೂ ಸರ್ಕಾರಿ ಉದ್ಯೋಗಗಳ ಅವಕಾಶವನ್ನು ಹೆಚ್ಚಿಸಲಿದೆ. ಮಕ್ಕಳಿಗಾಗಿ ವಿಜ್ಞಾನ–ಕಲೆ ಪ್ರದರ್ಶನ ಮತ್ತು ಐಟಿ ಕ್ವಿಜ್ ಆಯೋಜಿಸಲಾಗಿದೆ. ಮಂಗಳೂರು ಬೀಚ್ ಮ್ಯಾರಥಾನ್ ಓಟ ಬೀಚ್‌ನಲ್ಲೇ ನಡೆಯಲಿದೆ” ಎಂದು ಹೇಳಿದರು.
ಇದನ್ನೂ ಓದಿ: ಧಾರವಾಡ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ
ಈ ಕಾರ್ಯಕ್ರಮದ ಮೂಲಕ ಶೇ.100ರಷ್ಟು ಆದಾಯವನ್ನು ಕ್ಯಾನ್ಸರ್ ಪ್ಯಾಲಿಯೇಟಿವ್ ಕೇರ್‌ಗೆ ಮೀಸಲಿಡಲಾಗಿದ್ದು, ಸಂಗ್ರಹವಾಗುವ ಪ್ರತಿಯೊಂದು ರೂಪಾಯಿಯೂ ತಪಸ್ಯಾ ಫೌಂಡೇಶನ್ ಮೂಲಕ ಅಂತಿಮ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಆರೈಕೆಗೆ ಬಳಸಲಾಗುತ್ತದೆ. ಇದಲ್ಲದೆ, ಭವಿಷ್ಯದ ಒಲಿಂಪಿಯನ್‌ಗಳನ್ನು ರೂಪಿಸುವ ಉದ್ದೇಶದಿಂದ 10–15 ವರ್ಷ ವಯಸ್ಸಿನ 40 ಮಕ್ಕಳಿಗೆ ಟ್ರಯಾಥ್ಲಾನ್ ತರಬೇತಿ ನೀಡಲಾಗುತ್ತಿದೆ. ಸ್ಟಾರ್ಟಪ್‌ಗಳಿಗೆ ಮಾರ್ಗದರ್ಶನ ನೀಡುವ ಮೂಲಕ ನವೀನ ಉತ್ಪನ್ನಗಳ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತದೆ. ಮಂಗಳೂರನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸುವುದೂ ಈ ಉತ್ಸವದ ಪ್ರಮುಖ ಗುರಿಯಾಗಿದೆ.
ಫೆಸ್ಟಿವಲ್‌ನ ಅಂಗವಾಗಿ ಡುಯಾಥ್ಲಾನ್, 40K ಡ್ರೀಮ್ ಸೈಕ್ಲಿಂಗ್, ಒಲಿಂಪಿಕ್ ಮತ್ತು ಸ್ಪ್ರಿಂಟ್ ಟ್ರಯಾಥ್ಲಾನ್, ಟೀಮ್ ರಿಲೇ ಟ್ರಯಾಥ್ಲಾನ್, ಡ್ರೀಮ್ ಸ್ವಿಮ್, ಫನ್ ಸ್ವಿಮ್, ಅಕ್ವಾಥ್ಲಾನ್, ಫುಲ್ ಮತ್ತು ಹಾಫ್ ಮ್ಯಾರಥಾನ್, 10K ಡ್ರೀಮ್ ರನ್, 5K ಫನ್ ರನ್, SFI ನ್ಯಾಷನಲ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್, ಅಗ್ರಿ ಟೆಕ್ ಎಕ್ಸ್‌ಪೋ, ರಾಜ್ಯಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ, ಬೈಕ್ ಸ್ಟಂಟ್ ಶೋ, ನೃತ್ಯಾಂತಾರ 2026, ಕಲೆ ಮತ್ತು ನೃತ್ಯ ಸ್ಪರ್ಧೆಗಳು, ಬ್ಯಾಟಲ್ ಆಫ್ ಬ್ಯಾಂಡ್ಸ್, ಫ್ಯಾಷನ್ ಶೋ, ಸ್ವರದಿ ಲೈವ್ ಕಾರ್ಯಕ್ರಮ ಹಾಗೂ ಥ್ರೋಬಾಲ್ ಪಂದ್ಯಾಟಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ಯಶ್ Toxicಗೆ ಹೊಸ ‘ವಸಂತ’: ರುಕ್ಕು ನಯಾ ಲುಕ್ಕು
ನೋಂದಣಿ ಮಾಹಿತಿ ಕ್ರೀಡಾ ಸ್ಪರ್ಧೆಗಳು, ಸ್ಟಾರ್ಟಪ್ ಇಮರ್ಜ್ ಮತ್ತು ಸ್ವಯಂಸೇವಕರಾಗಿ ಭಾಗವಹಿಸಲು mangalurutriathlon.com ವೆಬ್‌ಸೈಟ್ ಮೂಲಕ ನೋಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ನವೀನ್ ಹೆಗ್ಡೆ (9324051848) ಅಥವಾ ಅರವಿಂದ್ ಕುಮಾರ್ (9844468159) ಅವರನ್ನು ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ರಿತೇಶ್, ಮುಹಮ್ಮದ್, ನಿತ್ಯಾನಂದ ಶೆಟ್ಟಿ, ಅರವಿಂದ್, ಕರುಣಾಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.























