ಎಲ್ಲಾ ಆರೋಪಗಳಿಗೆ ಸದನದಲ್ಲೇ ಉತ್ತರ: ಸತೀಶ್ ಜಾರಕಿಹೊಳಿ

0
13

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ‘ಗೂಂಡಾಗಿರಿ’ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ಎಲ್ಲ ಆರೋಪಗಳಿಗೆ ಸದನದಲ್ಲೇ ಉತ್ತರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಾವುದು ಸರಿ, ಯಾವುದು ತಪ್ಪು ಎಂಬುದಕ್ಕೆ ಸರ್ಕಾರವೇ ಸ್ಪಷ್ಟನೆ ನೀಡಲಿದೆ. ಈ ವಿಚಾರದಲ್ಲಿ ಹೊರಗಡೆ ಚರ್ಚೆ ನಡೆಸುವ ಅಗತ್ಯವಿಲ್ಲ, ವಿಧಾನಸಭೆಯಲ್ಲೇ ಸರ್ಕಾರದ ನಿಲುವು ಪ್ರಕಟವಾಗಲಿದೆ ಎಂದರು.

ಇದನ್ನೂ ಓದಿ:  24ರಂದು ಅಥಣಿಗೆ ಕ್ರೇಜಿಸ್ಟಾರ್ ರವಿಚಂದ್ರನ್

ರಾಜ್ಯಪಾಲರ ನಡೆ ಕುರಿತು ಮಾತನಾಡಿದ ಸಚಿವರು, ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ ಎಂದರು. ರಾಜ್ಯಪಾಲರು ಪೂರ್ಣ ಪ್ರಮಾಣದಲ್ಲಿ ಸರ್ಕಾರದ ಭಾಷಣವನ್ನು ಓದಬೇಕಿತ್ತು. ಅದನ್ನು ಓದದೇ ಇದ್ದುದರಿಂದಲೇ ಇಂದಿನ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದರು. ಹಿಂದೆ ಅನೇಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಟಿಪ್ಪಣಿಗಳನ್ನೂ ರಾಜ್ಯಪಾಲರು ಓದಿದ್ದಾರೆ. ಈ ಬಾರಿಯೂ ಓದಿದ್ದರೆ ಯಾವುದೇ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯಪಾಲರ ಭಾಷಣವು ರಾಜ್ಯ ಸರ್ಕಾರದ ಭಾಷಣವಾಗಿರುವುದರಿಂದ, ಅದನ್ನು ಓದುವುದು ರಾಜ್ಯಪಾಲರ ಕರ್ತವ್ಯ. ಆದರೆ ಈ ಬಾರಿ ಅದನ್ನು ಓದದೇ ಇರುವುದೇ ವಿವಾದಕ್ಕೆ ಕಾರಣವಾಗಿದೆ. ಮುಂದೇನು ಆಗಲಿದೆ ಎಂಬುದನ್ನು ಕಾದು ನೋಡಬೇಕು. ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಸರ್ಕಾರ ಸಿದ್ಧವಿದೆ ಎಂದು ಜಾರಕಿಹೊಳಿ ತಿಳಿಸಿದರು.

ಇದನ್ನೂ ಓದಿ:  ಹುಬ್ಬಳ್ಳಿ: ನವನಗರದಲ್ಲಿ ಚಿರತೆ ಪ್ರತ್ಯಕ್ಷ – ವೈರಲ್‌ ಆದ ವಿಡಿಯೋ

“ಬರೆದುಕೊಟ್ಟದ್ದನ್ನೆಲ್ಲ ರಾಜ್ಯಪಾಲರು ಓದಬೇಕೆಂದಿಲ್ಲ” ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಗೆ ಆಗುವುದಿಲ್ಲ. ಹಿಂದೆ ಇದೇ ರಾಜ್ಯಪಾಲರು ಸರ್ಕಾರ ಬರೆದು ಕೊಟ್ಟ ಭಾಷಣವನ್ನು ಓದಿದ್ದಾರೆ. ಆದ್ದರಿಂದ ಈಗ ಮಾತ್ರ ಬೇರೆ ರೀತಿಯ ನಡೆ ಸರಿಯಲ್ಲ ಎಂದು ಹೇಳಿದರು.

‘ಗೋ ಬ್ಯಾಕ್ ಗವರ್ನರ್’ ಎಂಬ ಘೋಷಣೆಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅದನ್ನು ಯಾರೋ ಒಬ್ಬರು ಹೇಳಿರಬಹುದು. ಆದರೆ ರಾಜ್ಯಪಾಲರಿಗೆ ವಾಪಸ್ ಹೋಗಿ ಎಂದು ಸರ್ಕಾರವಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಯಾರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  KLE ಸೊಸೈಟಿ ಪದಾಧಿಕಾರಿಗಳ ಆಯ್ಕೆ ಅವಿರೋಧ

ಇದೇ ವೇಳೆ ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಕುರಿತು ಮಾತನಾಡಿದ ಜಾರಕಿಹೊಳಿ, ರಾಜ್ಯದ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಸಚಿವ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ವಿಚಾರವನ್ನು ಹೈಕಮಾಂಡ್‌ವೇ ತೀರ್ಮಾನಿಸಬೇಕು. ಈ ಬಗ್ಗೆ ನಾವು ಯಾವುದೇ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

Previous article24ರಂದು ಅಥಣಿಗೆ ಕ್ರೇಜಿಸ್ಟಾರ್ ರವಿಚಂದ್ರನ್