ಚಿತ್ರದುರ್ಗ: ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದಿದ್ದ ಪಾಪಿ ಮಗನಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.
ಮೊಳಕಾಲ್ಮೂರು ತಾಲ್ಲೂಕಿನ ಕೊಪ್ಪ ಗ್ರಾಮದ ನಿವಾಸಿ ಸಿ. ಶಿವಾರೆಡ್ಡಿ ಶಿಕ್ಷೆಗೆ ಗುರಿಯಾದ ಆರೋಪಿ. ಈತ ತನ್ನ ತಾಯಿ ಅಂಜಿನಮ್ಮ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ್ದ.
ಆರೋಪಿ ಶಿವಾರೆಡ್ಡಿ ತೀವ್ರ ಮದ್ಯಪಾನದ ಚಟಕ್ಕೆ ದಾಸನಾಗಿದ್ದ, ಇದೇ ವಿಚಾರವಾಗಿ ಆತ ಪದೇ ಪದೇ ತನ್ನ ತಾಯಿ ಅಂಜಿನಮ್ಮ ಅವರೊಂದಿಗೆ ಜಗಳವಾಡುತ್ತಿದ್ದ. 2023ರ ನವೆಂಬರ್ 25ರಂದು ಸಂಜೆ 6.45ರ ಸುಮಾರಿಗೆ ಅಂಜಿನಮ್ಮ ಅವರು ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದಾಗ, ಅಲ್ಲಿಗೆ ಬಂದ ಶಿವಾರೆಡ್ಡಿ ಮದ್ಯ ಸೇವಿಸಲು ಹಣ ನೀಡುವಂತೆ ಪೀಡಿಸಿದ್ದಾನೆ.
ಇದನ್ನೂ ಓದಿ: ಹೃದಯಾಘಾತದಿಂದ ಜೀವನದ ಪರೀಕ್ಷೆಯನ್ನೇ ಮುಗಿಸಿದ PUವಿದ್ಯಾರ್ಥಿನಿ
ತಾಯಿ ಹಣ ನೀಡಲು ನಿರಾಕರಿಸಿದಾಗ ಆಕ್ರೋಶಗೊಂಡ ಆತ, “ನನ್ನ ಹೆಂಡತಿ ನನ್ನನ್ನು ಬಿಟ್ಟು ಹೋಗಿದ್ದಾಳೆ, ನೀನು ಕೂಡ ನನಗೆ ಸರಿಯಾಗಿ ಊಟ ಹಾಕುವುದಿಲ್ಲ, ನೀನು ಬದುಕಿದ್ದರೂ ಅಷ್ಟೇ ಸತ್ತಿದ್ದರೂ ಅಷ್ಟೇ” ಎಂದು ಕಿರುಚಾಡಿದ್ದಾನೆ. ತಕ್ಷಣ ಮನೆಯಿಂದ ಚಾಕು ತಂದು ಅಂಜಿನಮ್ಮ ಅವರ ಬಲಪಕ್ಕೆಗೆ ಬಲವಾಗಿ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಂಜಿನಮ್ಮ ಅವರನ್ನು ರಾಮಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ರಾಂಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಸಂತ ವಿಠಲ್ ಅಸೋದೆ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ ಅವರು, ಆರೋಪಿಯ ಮೇಲಿನ ಕೊಲೆ ಅಪರಾಧ (IPC 302) ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.






















