ಜನಸಾಗರದ ನಡುವೆ ‘ದೇವರ ಮರ’ ಪೂಜೆ ಸಂಭ್ರಮ
ಚಿತ್ರದುರ್ಗ (ಚಳ್ಳಕೆರೆ): ತಾಲೂಕಿನ ಚೆನ್ನಮ್ಮನಾಗತಿಹಳ್ಳಿಯ ಇತಿಹಾಸ ಪ್ರಸಿದ್ಧ ಕಾಡುಗೊಲ್ಲರ ಸಮುದಾಯದ ಆರಾಧ್ಯ ದೈವ ಶ್ರೀ ಕ್ಯಾತಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಗುರುವಾರ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆಯಿತು. ನಗರದ ರೈಲ್ವೇ ಗೇಟ್ ಬಳಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಾತ್ರೆಯ ಪ್ರಮುಖ ಸಂಪ್ರದಾಯವಾದ ‘ದೇವರ ಮರ’ ಕಡಿಯುವ ಧಾರ್ಮಿಕ ವಿಧಿವಿಧಾನಗಳು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದೊಂದಿಗೆ ನೆರವೇರಿದವು.
ಜಾತ್ರೆಯ ಸಂಪ್ರದಾಯದಂತೆ ಗುರುವಾರ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು, ಮರವಾಯಿ ಬಳಗದವರು ರೊಟ್ಟಿ–ಬುತ್ತಿ, ಕೊಡಲಿ–ಮಚ್ಚು ಸೇರಿದಂತೆ ಅಗತ್ಯ ಪೂಜಾ ಪರಿಕರಗಳನ್ನು ಹೊತ್ತು ಜೋಡೆತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಮೆರವಣಿಗೆಯಾಗಿ ಚಳ್ಳಕೆರೆ ನಗರದ ರೈಲ್ವೇ ಗೇಟ್ ಬಳಿ ಜಮಾಯಿಸಿದರು. ವಾದ್ಯಮೇಳ, ನಾಮಸ್ಮರಣೆ ಹಾಗೂ ಭಕ್ತಿಗೀತೆಗಳ ನಡುವೆ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಚಿತ್ರದುರ್ಗ ಬಸ್ ಅಪಘಾತ ಪ್ರಕರಣ : ಬದುಕುಳಿಯದ ಬಸ್ ಚಾಲಕ
ದೇವಸ್ಥಾನದ ಗುಡಿ ನಿರ್ಮಾಣಕ್ಕೆ ಅಗತ್ಯವಾಗಿರುವ ಅತ್ತಿಮರ, ಕಳ್ಳಿಮರ, ಜಿವ್ವೆ ಮರ ಸೇರಿದಂತೆ ಇತರೆ ಪವಿತ್ರ ಮರಗಳನ್ನು ಕಡಿಯುವ ಮುನ್ನ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಮರಗಳಿಗೆ ಕಂಕಣ ಕಟ್ಟಿಸಿ, ಹಾಲು–ತುಪ್ಪ ಅರ್ಪಿಸಿ ಪೂಜಿಸಿದ ನಂತರ “ಗೋವಿಂದ.. ಗೋವಿಂದ..” ಎಂಬ ಭಕ್ತಿನಾಮ ಘೋಷಣೆಗಳೊಂದಿಗೆ ಮರ ಕಡಿಯುವ ಶಾಸ್ತ್ರವನ್ನು ಪೂರೈಸಲಾಯಿತು. ನಂತರ ಕಡಿದ ಮರವನ್ನು ವಾದ್ಯಮೇಳಗಳೊಂದಿಗೆ ಜಾತ್ರೆ ನಡೆಯುವ ಸ್ಥಳವಾದ ‘ಮಸಲದಿಮೆಗೆ’ ಭಕ್ತಿಭಾವದಿಂದ ಕೊಂಡೊಯ್ಯಲಾಯಿತು.
ಈ ಜಾತ್ರೆ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತವಾಗದೇ ಪಕ್ಕದ ರಾಜ್ಯಗಳಾದ ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಿಂದಲೂ ಅಪಾರ ಸಂಖ್ಯೆಯ ಭಕ್ತರನ್ನು ಸೆಳೆಯುತ್ತಿದೆ. ಶ್ರೀ ಕ್ಯಾತಪ್ಪ ದೇವರ ಮಹಿಮೆಗೆ ಸಾಕ್ಷಿಯಾಗಿ 21 ಗುಡಿಕಟ್ಟುಗಳ ಜನರು ಒಂದೆಡೆ ಸೇರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಸಮುದಾಯದ ಐಕ್ಯತೆ ಮತ್ತು ಧಾರ್ಮಿಕ ಪರಂಪರೆಯ ಪ್ರತೀಕವಾಗಿ ಜಾತ್ರೆ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಮೈಸೂರು: ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು
ಈ ಪವಿತ್ರ ಕಾರ್ಯಕ್ರಮದಲ್ಲಿ ಹಿರಿಯೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಯಾದವಾನಂದ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಶಾಸಕ ಟಿ. ರಘುಮೂರ್ತಿ ಅವರು ಪೂಜೆಯಲ್ಲಿ ಭಾಗವಹಿಸಿ ಜಾತ್ರೆಯ ಯಶಸ್ಸಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ವೀರೇಶ್ (ಅಪ್ಪು), ಮಹಲಿಂಗಪ್ಪ, ಅಜ್ಜಯ್ಯ, ಮರವಾಯಿ ವೆಂಕಟೇಶ, ಶ್ರೀನಿವಾಸ, ಈರಣ್ಣ, ಪೂಜಾರಿ ತಿಪ್ಪೇಸ್ವಾಮಿ, ಚಂದ್ರಪ್ಪ, ಚಿಕ್ಕಣ್ಣ, ಕಾಂತರಾಜ್, ಜಿ.ಪಂ ಮಾಜಿ ಅಧ್ಯಕ್ಷ ರವಿಕುಮಾರ್, ಶಶಿಧರ್, ಸರೋಜಮ್ಮ, ಶ್ವೇತಾ, ದೇವಿರಮ್ಮ, ಜಯಮ್ಮ ಹಾಗೂ ಮರವಾಯಿ ವಂಶಸ್ಥರು ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.









