Home ನಮ್ಮ ಜಿಲ್ಲೆ ಚಿತ್ರದುರ್ಗ ಅನ್ಯಾಯವಾದ ಕಚೇರಿಯ ಮುಂಭಾಗವೇ ನಮ್ಮ ಹೋರಾಟ ಸ್ಥಳ

ಅನ್ಯಾಯವಾದ ಕಚೇರಿಯ ಮುಂಭಾಗವೇ ನಮ್ಮ ಹೋರಾಟ ಸ್ಥಳ

0
4

ಸ್ಥಳ ಬದಲಾವಣೆ ‘ತುಘಲಕ್ ನಿರ್ಧಾರ’ ಎಂದ ರೈತ ಮುಖಂಡರು

ಚಿತ್ರದುರ್ಗ (ಚಳ್ಳಕೆರೆ): ಧರಣಿ–ಪ್ರತಿಭಟನೆಗಳಿಗೆ ತಾಲೂಕು ಆಡಳಿತವು ಏಕಾಏಕಿ ಸ್ಥಳ ಬದಲಾವಣೆ ಮಾಡಿರುವ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದು ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಎಲ್ಲಿ ಅನ್ಯಾಯವಾಗುತ್ತದೆಯೋ, ಆ ಕಚೇರಿಯ ಮುಂಭಾಗದಲ್ಲೇ ಹೋರಾಟ ನಡೆಸುವುದು ನಮ್ಮ ಸಂವಿಧಾನಾತ್ಮಕ ಹಕ್ಕು. ಅದನ್ನು ಬಿಟ್ಟು ಊರ ಹೊರಗಡೆ, ಜನಸಂಚಾರವೇ ಇಲ್ಲದ ಜಾಗವನ್ನು ನಿಗದಿಪಡಿಸಿರುವುದು ಖಂಡನೀಯ, ಎಂದು ರೈತ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ತಾಲೂಕು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ರಾಜ್ಯ ರೈತ ಸಂಘ, ವಿವಿಧ ರೈತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ತಾಲೂಕು ಆಡಳಿತವು ಧರಣಿ ಹಾಗೂ ಪ್ರತಿಭಟನೆಗಳಿಗೆ ಪ್ರತ್ಯೇಕ ಹಾಗೂ ದೂರದ ಸ್ಥಳವನ್ನು ನಿಗದಿಪಡಿಸಿರುವ ಆದೇಶವನ್ನು ತೀವ್ರವಾಗಿ ವಿರೋಧಿಸಿ ನಾಯಕರು ಮಾತನಾಡಿದರು.

ಇದನ್ನೂ ಓದಿ: ಚಿತ್ರದುರ್ಗ ಬಸ್‌ ಅಪಘಾತ ಪ್ರಕರಣ : ಬದುಕುಳಿಯದ ಬಸ್ ಚಾಲಕ

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಸರ್ಕಾರ ಮತ್ತು ಆಡಳಿತದ ಈ ನಡೆ “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು” ಎಂಬ ಗಾದೆಗೆ ತಕ್ಕಂತಿದೆ ಎಂದು ಕಿಡಿಕಾರಿದರು. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ರೈತರಿಗೆ ಅಥವಾ ಸಾರ್ವಜನಿಕರಿಗೆ ಅನ್ಯಾಯವಾದಾಗ, ಸಂಬಂಧಪಟ್ಟ ಇಲಾಖೆಗಳ ಮುಂಭಾಗದಲ್ಲೇ ಪ್ರತಿಭಟನೆ ನಡೆಸಿದರೆ ಮಾತ್ರ ಅಧಿಕಾರಿಗಳಿಗೆ ಜವಾಬ್ದಾರಿ ಬೋಧಿಸಲು ಸಾಧ್ಯ.

ತಾಲೂಕು ಕಚೇರಿಯಲ್ಲಿ ಅನ್ಯಾಯವಾದರೆ ತಾಲೂಕು ಕಚೇರಿ ಮುಂದೆ, ಕೆಇಬಿ ಸಮಸ್ಯೆಯಾದರೆ ಕೆಇಬಿ ಕಚೇರಿ ಮುಂದೆ ಹೋರಾಟ ನಡೆಯಬೇಕು. ಎಲ್ಲೋ ಒಂದು ಕಡೆ ಜಾಗ ನಿಗದಿಪಡಿಸಿ ಅಲ್ಲಿ ಹೋಗಿ ಕೂತರೆ ಅದು ಹೋರಾಟವೇ ಅಲ್ಲ. ನಮಗೆ ಜಾಗ ಮುಖ್ಯವಲ್ಲ, ನಮಗೆ ನ್ಯಾಯ ಮುಖ್ಯ, ಎಂದು ಅವರು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಚಿಕ್ಕಣ್ಣ, ಇದು ಹೋರಾಟಗಾರರನ್ನು ಹತ್ತಿಕ್ಕುವ ವ್ಯವಸ್ಥಿತ ಕುತಂತ್ರವಾಗಿದೆ. ಕಳೆದ 70 ವರ್ಷಗಳಿಂದ ನಡೆದುಕೊಂಡು ಬಂದಿರುವ ಹೋರಾಟದ ಪದ್ಧತಿಯನ್ನು ಬದಲಿಸಲು ಯಾರಿಗೂ ಅಧಿಕಾರವಿಲ್ಲ. ಈ ಅವೈಜ್ಞಾನಿಕ ಆದೇಶದ ವಿರುದ್ಧ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಧಿಕ್ಕಾರ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಮೈಸೂರು: ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು

ಪ್ರಗತಿಪರ ರೈತ ಮುಖಂಡ ಆರ್.ಎ. ದಯಾನಂದ ಮೂರ್ತಿ ಮಾತನಾಡಿ, ತಾಲೂಕು ಆಡಳಿತವು ಯಾವುದೇ ಮುನ್ಸೂಚನೆ ನೀಡದೇ, ಹೋರಾಟಗಾರರಿಗೆ ಮಾಹಿತಿ ನೀಡದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಅಕ್ಷಮ್ಯ. ತಮ್ಮದೇ ಆದ ‘ತುಘಲಕ್ ಸಂತತಿ’ಯ ನಿರ್ಧಾರದಂತೆ ಊರ ಹೊರಗಡೆ, ಜನಸಂಚಾರವೇ ಇಲ್ಲದ ಜಾಗವನ್ನು ನಿಗದಿಪಡಿಸಿರುವುದಕ್ಕೆ ನನ್ನ ತೀವ್ರ ವಿರೋಧವಿದೆ. ಯಾವ ಇಲಾಖೆಯಲ್ಲಿ ಅನ್ಯಾಯ ನಡೆಯುತ್ತದೆಯೋ, ಆ ಇಲಾಖೆಯ ಮುಂಭಾಗದಲ್ಲೇ ಹೋರಾಟ ನಡೆಸುವುದು ನಮ್ಮ ಹಕ್ಕು. ಆಡಳಿತವು ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು, ಎಂದು ಆಗ್ರಹಿಸಿದರು.

ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಚಿಕ್ಕಣ್ಣ, ಭೂತಣ್ಣ, ರಾಜಣ್ಣ, ಶ್ರೀಕಂಠಮೂರ್ತಿ, ಕಮ್ಯುನಿಸ್ಟ್ ಮುಖಂಡರಾದ ಶಿವರುದ್ರಪ್ಪ, ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಶಿವಲಿಂಗಪ್ಪ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಹೇಶ್ ಸಿ. ನಗರಂಗೆರೆ, ಮಾರುತಿ ಬಾಲರಾಜ್, ಮುರಳಿ, ಕರ್ನಾಟಕ ರಕ್ಷಣಾ ವೇದಿಕೆಯ ಚಂದ್ರಣ್ಣ, ಸಾಮಾಜಿಕ ಹೋರಾಟಗಾರ ದ್ಯಾಮಣ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ತಾಲೂಕು ಆಡಳಿತದ ಕ್ರಮವನ್ನು ಒಗ್ಗಟ್ಟಾಗಿ ಖಂಡಿಸಿದರು.