ಜಮೀನು ನೋಂದಣಿ: ರೈತರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಅಧಿಕಾರಿಗಳ ಸ್ಪಷ್ಟನೆ

0
29

ಚಳ್ಳಕೆರೆ: ತಾಲೂಕಿನ ಪಗಡಲಬಂಡೆ ಗ್ರಾಮದ ಜಮೀನು ನೋಂದಣಿ ವೇಳೆ ಉಂಟಾದ ಗೊಂದಲ, ವಿಳಂಬ ಮತ್ತು ರೈತರು ಕಚೇರಿಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ, ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷಾ ಹಾಗೂ ಉಪನೋಂದಣಾಧಿಕಾರಿ ಚಂದ್ರಮ್ಮ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಘಟನೆಯ ಕುರಿತು ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ.

ಜ.16ರಂದು ಪಗಡಲಬಂಡೆ ಗ್ರಾಮದ ಸರ್ವೆ ನಂಬರ್ 49/2 ರಲ್ಲಿನ 3 ಎಕರೆ ಜಮೀನು ಮಾರಾಟದ ನೋಂದಣಿ ವೇಳೆ ನಡೆದ ಎಲ್ಲಾ ಬೆಳವಣಿಗೆಗಳನ್ನು ಅಧಿಕಾರಿಗಳು ಎಳೆಎಳೆಯಾಗಿ ವಿವರಿಸಿದರು.

ಇದನ್ನೂ ಓದಿ: Deepfake video ವಿರುದ್ಧ ಸಾರ್ವಜನಿಕರಿಗೆ ಸುಧಾಮೂರ್ತಿ ಎಚ್ಚರಿಕೆ

ತಹಶೀಲ್ದಾರ್ ರೆಹಮಾನ್ ಪಾಷಾ ಹೇಳಿದ್ದೇನು?: ಘಟನೆಯ ಹಿನ್ನೆಲೆ ಕುರಿತು ಮಾತನಾಡಿದ ತಹಶೀಲ್ದಾರ್ ರೆಹಮಾನ್ ಪಾಷಾ, ನೋಂದಣಿ ಪ್ರಕ್ರಿಯೆಗೆ ಮುನ್ನವೇ, ಜ.12ರಂದು ಗ್ರಾಮದ ಕೆಲವು ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದರು. ಸದರಿ ಜಮೀನು ಪಿಟಿಸಿಎಲ್ (PTCL) ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ, ಆದ್ದರಿಂದ ಮಾರಾಟ ಮಾಡಬಾರದು ಹಾಗೂ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಆಕ್ಷೇಪಣೆ ಹಿನ್ನೆಲೆಯಲ್ಲಿ ಉಪನೋಂದಣಾಧಿಕಾರಿಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಲಾಗಿತ್ತು ಎಂದು ಅವರು ತಿಳಿಸಿದರು. ಆದರೆ, ಕೂಲಂಕುಷವಾಗಿ ದಾಖಲೆಗಳನ್ನು ಪರಿಶೀಲಿಸಿದಾಗ, ಈ ಜಮೀನು 1962–63ರಲ್ಲಿ ‘ಅಗಸರ ಜಾತಿಗೆ’ ಕೇವಲ 10 ರೂ. ಅಪ್‌ಸೆಟ್ ಬೆಲೆಯಲ್ಲಿ ಮಂಜೂರಾಗಿದ್ದು, 15 ವರ್ಷಗಳ ಪರಭಾರೆ ನಿಷೇಧ ಅವಧಿ ಈಗಾಗಲೇ ಮುಗಿದಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಜಮೀನು ಮಾರಾಟಕ್ಕೆ ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ದೃಢಪಟ್ಟಿದೆ.

ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಸೇವೆಗೆ ಗುಡ್‌ಬೈ

ಈ ಹಿನ್ನೆಲೆಯಲ್ಲಿ, ನವೆಂಬರ್ 24, 2025ರಂದು ತಹಶೀಲ್ದಾರ್ ಕಚೇರಿಯಿಂದ ನಿರಾಕ್ಷೇಪಣಾ ಪತ್ರ (NOC) ಕೂಡ ನೀಡಲಾಗಿದೆ. ಯಾವುದೇ ಕಾನೂನು ತೊಡಕಿಲ್ಲ ಎಂಬುದು ದೃಢಪಟ್ಟ ನಂತರವೇ ನೋಂದಣಿಗೆ ಅನುಮತಿ ನೀಡಲಾಗಿದೆ ಎಂದು ರೆಹಮಾನ್ ಪಾಷಾ ಸ್ಪಷ್ಟಪಡಿಸಿದರು.

ಉಪನೋಂದಣಾಧಿಕಾರಿ ಚಂದ್ರಮ್ಮ ಅವರ ಸ್ಪಷ್ಟನೆ: ನೋಂದಣಿ ದಿನದಂದು ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಉಪನೋಂದಣಾಧಿಕಾರಿ ಚಂದ್ರಮ್ಮ, ಅರ್ಜಿದಾರರು ಜ.14ರಂದು ಶುಲ್ಕ ಪಾವತಿಸಿ, ಜ.16ರ ಬೆಳಿಗ್ಗೆ 10:30ಕ್ಕೆ ಸ್ಲಾಟ್ ಬುಕ್ ಮಾಡಿಕೊಂಡಿದ್ದರು ಎಂದು ಹೇಳಿದರು. ಆನ್‌ಲೈನ್ ಅರ್ಜಿಯಲ್ಲಿ ಕೆಲವು ತಾಂತ್ರಿಕ ಲೋಪಗಳಿದ್ದ ಕಾರಣ, ಮೂರು ಬಾರಿ ಅರ್ಜಿಯನ್ನು ವಾಪಸ್ ಕಳುಹಿಸಲಾಗಿತ್ತು. ನಂತರ ವಕೀಲರು ಬಂದು ದೋಷ ಸರಿಪಡಿಸಿದ ಬಳಿಕ ಸ್ಲಾಟ್ ನೀಡಲಾಗಿತ್ತು ಎಂದು ವಿವರಿಸಿದರು.

ಇದನ್ನೂ ಓದಿ: Smart Energyಯ ಪ್ರಮುಖ ಕೇಂದ್ರವಾಗಿ ಕರ್ನಾಟಕ ರೂಪುಗೊಳ್ಳಲಿದೆ

ಆದರೆ, ನೋಂದಣಿ ದಿನದಂದು ತಹಶೀಲ್ದಾರ್ ಕಚೇರಿಯಿಂದ ಬಂದ ಪತ್ರ. ಕಲ್ಲೇಶಪ್ಪ ಎಂಬುವವರು ಫೋನ್ ಮೂಲಕ ವ್ಯಕ್ತಪಡಿಸಿದ ಆಕ್ಷೇಪಣೆ. ಇವುಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ಪಡೆಯುವ ಉದ್ದೇಶದಿಂದ ತಾತ್ಕಾಲಿಕವಾಗಿ ನೋಂದಣಿಯನ್ನು ತಡೆಹಿಡಿಯಲಾಯಿತು ಎಂದು ಚಂದ್ರಮ್ಮ ತಿಳಿಸಿದರು.

ರೈತರ ಆತ್ಮಹತ್ಯೆ ಯತ್ನಕ್ಕೆ ಕಾರಣವಾದ ಪರಿಸ್ಥಿತಿ: ಮುಂದುವರಿದು ಮಾತನಾಡಿದ ಅವರು, ಖರೀದಿದಾರರು ಒಂದು ದಿನ ಕಾಲಾವಕಾಶ ನೀಡಲು ಒಪ್ಪಿದ್ದರು. ಆದರೆ, ಜಮೀನು ಮಾರಾಟಗಾರರಾದ ರೈತರು ತೀವ್ರ ಆಕ್ರೋಶಗೊಂಡು, ಕಚೇರಿಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ವಿವರಿಸಿದರು.

ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ

VIP ಸ್ಲಾಟ್‌ನಲ್ಲಿ ನೋಂದಣಿ ಪೂರ್ಣ: ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ, ಯಾವುದೇ ಅನಾಹುತ ಸಂಭವಿಸಬಾರದು ಎಂಬ ಮುಂಜಾಗ್ರತಾ ಕ್ರಮವಾಗಿ, ಕಚೇರಿಯಲ್ಲಿ ಲಭ್ಯವಿದ್ದ ವಿಐಪಿ (VIP) ಸ್ಲಾಟ್ ಬಳಸಿಕೊಂಡು,
ಅಂದು ಸಂಜೆ ಸುಮಾರು 4 ಗಂಟೆಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು ಎಂದು ಉಪನೋಂದಣಾಧಿಕಾರಿ ಚಂದ್ರಮ್ಮ ತಿಳಿಸಿದರು.

ಒತ್ತಡಕ್ಕೆ ಮಣಿದು ವಿಳಂಬವಲ್ಲ – ಅಧಿಕಾರಿಗಳ ಸ್ಪಷ್ಟನೆ: ಈ ವೇಳೆ ಮಾತನಾಡಿದ ತಹಶೀಲ್ದಾರ್ ರೆಹಮಾನ್ ಪಾಷಾ ಹಾಗೂ ಉಪನೋಂದಣಾಧಿಕಾರಿ ಚಂದ್ರಮ್ಮ, “ಕಲ್ಲೇಶಪ್ಪ ಅವರ ಆಕ್ಷೇಪಣೆ ಹಾಗೂ ಇಲಾಖೆಯಿಂದ ಬಂದ ಪತ್ರದ ಹಿನ್ನೆಲೆಯಲ್ಲಿ ಕೇವಲ ಪರಿಶೀಲನೆಗಾಗಿ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಯಾರದ್ದೇ ಒತ್ತಡಕ್ಕೆ ಮಣಿದು ಅಥವಾ ದುರುದ್ದೇಶದಿಂದ ನೋಂದಣಿ ವಿಳಂಬ ಮಾಡಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದರು.

ಆಡಳಿತಾತ್ಮಕ ಜವಾಬ್ದಾರಿ–ಸಾರ್ವಜನಿಕ ಆತಂಕ: ಒಟ್ಟಾರೆ, ಪಗಡಲಬಂಡೆ ಜಮೀನು ನೋಂದಣಿ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ. ಸಾರ್ವಜನಿಕ ಆಕ್ಷೇಪಣೆ. ರೈತರ ಆತಂಕ ಇವೆಲ್ಲವೂ ಒಂದೇ ಸಮಯದಲ್ಲಿ ಮುಖಾಮುಖಿಯಾದ ಹಿನ್ನೆಲೆಯಲ್ಲಿ, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸ್ಪಷ್ಟ ಸಂವಹನ ಮತ್ತು ಸಮಯೋಚಿತ ನಿರ್ಧಾರ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Previous articleರಾಜ್ಯಾದ್ಯಂತ ತೀವ್ರಗೊಳ್ಳುತ್ತಿರುವ ಚಳಿ: ಮುಂಜಾನೆ ಮನೆಯಿಂದ ಹೊರಬರಲೇ ಬೇಡಿ..!