ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಕಾಲಿಕ ಮಳೆ ಮುಂದುವರೆದಿದ್ದು, ರೈತರು ಮತ್ತು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.
ಕಳೆದೆರಡು ದಿನಗಳಿಂದ ಅಕಾಲಿಕ ಮಳೆ ಬೀಳುತ್ತಿದ್ದು, ಬುಧವಾರವೂ ಸಹ ಮುಂದುವರೆದಿದೆ. ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣ ಉಂಟಾಗಿ. ತುಂತರು ಮಳೆಯಾಗುತ್ತಿದೆ. ಮಲೆನಾಡು ಸೇರಿದಂತೆ ಬಯಲು ಭಾಗದ ಕೆಲವೆಡೆ ಹೆಚ್ಚು ಮಳೆ ಸುರಿದಿದೆ.
ಈಗಾಗಲೇ ಭತ್ತ ಮತ್ತು ಕಾಫಿಕೊಯ್ಲು ಆರಂಭವಾಗಿದ್ದು, ಇದೇ ರೀತಿ ಮಳೆ ಮುಂದುವರೆದರೆ ಕಾಫಿ ಹಣ್ಣು ನೆಲದ ಪಾಲಾಗಲಿದೆ ಎಂಬ ಆತಂಕ ಬೆಳೆಗಾರರಲ್ಲಿ ಮೂಡಿದೆ. ಮೂಡಿಗೆರೆಯಲ್ಲಿ ಮಳೆ ಬಿರುಸುಗೊಂಡಿದ್ದರಿಂದ ನೀರಿನಲ್ಲಿ ಕಾಫಿಹಣ್ಣು ಕೊಚ್ಚಿಕೊಂಡು ಹೋಗದಂತೆ ಗುಡಿಸಿ ಗುಡ್ಡೆಹಾಕುವುದರಲ್ಲಿ ಕಾರ್ಮಿಕರು ಮಗ್ನರಾಗಿದ್ದರು.
ಇದನ್ನೂ ಓದಿ: ಮೈಲಾಪುರದ ಮಲ್ಲಯ್ಯನ ಜಾತ್ರೆಗೆ ಅದ್ಧೂರಿ ಚಾಲನೆ
ಬಿಳ್ಳೂರು-ತರೀಕೆರೆಯಲ್ಲಿ ಗರಿಷ್ಠ ಮಳೆ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಹಲವೆಡೆ ಬಿದ್ದಿರುವ ಮಳೆ ವಿವರ ಮಿ.ಮೀ.ಗಳಲ್ಲಿ ಇಂತಿದೆ. ಮೂಡಿಗೆರೆ 0.6, ಕೊಟ್ಟಿಗೆಹಾರ 6.8, ಗೋಣಿಬೀಡು 13, ಜಾವಳಿ 6, ಹೊಸಕೆರೆ 4.2, ಬಿಳ್ಳೂರು 36, ಕಳಸ 5.6, ಹಿರೇಬೈಲು 28, ನರಸಿಂಹರಾಜಪುರ 6, ಕಿಗ್ಗ 4.4, ಕೊಪ್ಪ 5, ಹರಿಹರಪುರ 2, ಜಯಪುರ 7.8, ಕಮ್ಮರಡಿ 25.8, ಬಸರಿಕಟ್ಟೆ 18.4, ತರೀಕೆರೆ 36, ಲಕ್ಕವಳ್ಳಿ 12, ಲಿಂಗದಹಳ್ಳಿ 11.2, ಹುಣಸಘಟ್ಟ 33 ಮತ್ತು ಬೀರೂರಿನಲ್ಲಿ 0.2 ಮಿಲಿ ಮೀಟರ್ ಮಳೆಯಾಗಿದೆ.























