ಮಂಗಳೂರು: ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಲಾಠಿ ಮತ್ತು ಗನ್ ತರಬೇತಿ ನೀಡದೆ, ಹಿಂದುಳಿದ ವರ್ಗದ ಮಕ್ಕಳಿಗೆ ಏಕೆ ತರಬೇತಿ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಪಾಕಿಸ್ತಾನ ಮತ್ತು ಮುಸ್ಲಿಂ ವಿಷಯಗಳ ಹೊರತಾಗಿ ಬೇರೇನೂ ಗೊತ್ತಿಲ್ಲ. 10 ವರ್ಷಗಳ ಆಡಳಿತದಲ್ಲಿ ಏನನ್ನು ಹಿಡಿದು ಮತ ಕೇಳುತ್ತೀರಿ? ಸಚಿವ ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಎನ್ನುವುದು ಸರಿಯಲ್ಲ ಎಂದರು.
ಆರೆಸ್ಸೆಸ್ ನೋಂದಣಿ ಆಗಿಲ್ಲ ಏಕೆ?: ಆರೆಸ್ಸೆಸ್ ಸಂಘಟನೆಗೆ 100 ವರ್ಷಗಳಾಗಿವೆ. ಆದರೆ, ಅದು ಏಕೆ ಇನ್ನೂ ನೋಂದಣಿ ಆಗಿಲ್ಲ? ನೋಂದಣಿ ಆಗದ ಸಂಘಟನೆಗೆ ಹಣ ಎಲ್ಲಿಂದ ಬರುತ್ತದೆ, ಖಾತೆಯಲ್ಲಿ ಎಷ್ಟು ಹಣವಿದೆ, ತರಬೇತಿ ಹೇಗೆ ನಡೆಯುತ್ತದೆ ಎಂಬುದನ್ನು ಸಂವಿಧಾನದಲ್ಲಿ ಏಕೆ ಕೇಳಬಾರದು ಎಂದು ಭಂಡಾರಿ ಪ್ರಶ್ನಿಸಿದರು.
“ಆರೆಸ್ಸೆಸ್ ಒಂದು ಸಂಘಟನೆಯೇ ಅಲ್ಲ. ಸಂಘಟನೆ ಆಗಿದ್ದರೆ ನೋಂದಣಿ ಆಗಿರಬೇಕು, ಆದರೆ ಅದ್ಯಾವುದೂ ಇಲ್ಲ” ಎಂದು ಅವರು ಹೇಳಿದರು.
ಸರಕಾರಿ ಜಾಗದಲ್ಲಿ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ: ಸರಕಾರಿ ಮೈದಾನ, ರಸ್ತೆ, ಶಾಲೆಗಳಲ್ಲಿ ಖಾಸಗಿ ಸಂಘಟನೆಗಳು ಕಾರ್ಯ ಚಟುವಟಿಕೆ ನಡೆಸಲು ಅನುಮತಿ ಕಡ್ಡಾಯ. ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಈ ನಿರ್ಧಾರ ಸರಿಯಾಗಿಯೇ ಇದೆ ಎಂದು ಭಂಡಾರಿ ಹೇಳಿದರು.
ಮಡಿಕೇರಿಯಲ್ಲಿ ಮಕ್ಕಳಿಗೆ ಗನ್ ತರಬೇತಿ ನೀಡಿದ್ದನ್ನು ನಾವು ನೋಡಿದ್ದೇವೆ. ಬಿಜೆಪಿ-ಆರೆಸ್ಸೆಸ್ ನಾಯಕರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ, ಇಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಸ್ತ್ರ ಕೊಟ್ಟು ಪ್ರಚೋದಿಸುವುದು ಎಲ್ಲಿಯ ನ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಿನೇಶ್ ಅಮೀನ್ ಮಟ್ಟು ಆರೋಪಕ್ಕೆ ತಿರುಗೇಟು: ದಿನೇಶ್ ಅಮೀನ್ ಮಟ್ಟು ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಭಂಡಾರಿ, ತಮ್ಮ ಕಾಲೇಜಿನಲ್ಲಿ ಆರೆಸ್ಸೆಸ್‌ನ ಯಾವುದೇ ಕಾರ್ಯಕ್ರಮ ನಡೆದಿಲ್ಲ. “ಸೃಷ್ಟಿ” ಎಂಬ ವಿಜ್ಞಾನ ಮಾಡೆಲ್ ಕಾರ್ಯಕ್ರಮದಲ್ಲಿ ಎಬಿವಿಪಿ ಪಾಲ್ಗೊಂಡಿತ್ತು.
ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರು ಭಾಗವಹಿಸಿದ್ದರಿಂದ ನಾನು ಭಾಗವಹಿಸಿದ್ದೆ. ಮುಂದೆ ಇಂತಹ ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಹಿಳಾ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.























