ಚಿಕ್ಕಬಳ್ಳಾಪುರ: ನಿನ್ನೆ ರಾತ್ರಿ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮದಲ್ಲಿ ಪಾಲ್ಗೊಂಡು ಬೈಕ್‌ನಲ್ಲಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದ ವೇಳೆ, ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಜ್ಜವಾರ ಗ್ರಾಮದ ನಾಲ್ವರು ಯುವಕರ ಮನೆಗಳಿಗೆ ಸಂಸದ ಡಾ. ಕೆ. ಸುಧಾಕರ್ ಅವರು ಭೇಟಿ ನೀಡಿ, ಮೃತರ ಪೋಷಕರು ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ವೈಯಕ್ತಿಕ ಪರಿಹಾರ: ಈ ಸಂದರ್ಭದಲ್ಲಿ ಸಂಸದರು ಮೃತ ಯುವಕರ ಕುಟುಂಬಗಳಿಗೆ ತಲಾ ₹50,000 ಆರ್ಥಿಕ ಸಹಾಯಧನ ನೀಡಿದರು. ಅಕಾಲಿಕವಾಗಿ ಪ್ರಾಣ ಕಳೆದುಕೊಂಡ ಯುವಕರನ್ನು ನೆನೆದು ಮಾತನಾಡಿದ ಅವರು, “ಬಾಳಿ ಬದುಕಬೇಕಾದ ಯುವಕರು ಈ ರೀತಿ ದಾರುಣವಾಗಿ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ. ಈ ದುರ್ಘಟನೆ ಇಡೀ ಅಜ್ಜವಾರ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಹೆತ್ತವರ ದುಃಖ ಹೇಳತೀರದು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಭಾವನಾತ್ಮಕವಾಗಿ ಹೇಳಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಟಿಪ್ಪರ್–ಬೈಕ್ ಅಪಘಾತದಲ್ಲಿ ನಾಲ್ವರು ಸಾವು: ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಪ್ರತಿಕ್ರಿಯೆ ನೀಡಿದ ಡಾ. ಕೆ. ಸುಧಾಕರ್, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳಲ್ಲಿ ಯುವಕರು ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ಟ್ರಿಪಲ್ ರೈಡಿಂಗ್, ಅತಿಯಾದ ವೇಗ, ಹಾಗೂ ಸಂಚಾರ ನಿಯಮ ಉಲ್ಲಂಘನೆ ಇಂತಹ ದುಸ್ಸಾಹಸಗಳು ಕ್ಷಣಮಾತ್ರದಲ್ಲಿ ಜೀವಕ್ಕೆ ಕುತ್ತು ತರುತ್ತವೆ ಎಂದು ಎಚ್ಚರಿಸಿದರು.
ಯುವಕರು ವಾಹನ ಚಲಾಯಿಸುವಾಗ ಅತ್ಯಂತ ಜಾಗರೂಕತೆ ವಹಿಸಬೇಕು. ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಸಂಚಾರ ನಿಯಮಗಳ ಮಹತ್ವದ ಕುರಿತು ಸೂಕ್ತ ಮಾರ್ಗದರ್ಶನ ಹಾಗೂ ಮುನ್ನೆಚ್ಚರಿಕೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Train Fare: ಇಂದಿನಿಂದ ರೈಲು ಪ್ರಯಾಣ ದರ ಏರಿಕೆ
ಈ ದುರ್ಘಟನೆ ಬಳಿಕ ಅಜ್ಜವಾರ ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದ್ದು, ಮೃತ ಯುವಕರ ಕುಟುಂಬಗಳ ಆಕ್ರಂದನ ಕಣ್ಣೀರಾಗಿಸಿದೆ.























