ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯಲ್ಲಿ ಅನಧಿಕೃತವಾಗಿ ಹಾಕಿದ್ದ ಬ್ಯಾನರ್ ತೆರವು ಮಾಡಿದ ಕಾರಣಕ್ಕೆ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಘಟನೆ ಆಡಳಿತ ವಲಯದಲ್ಲಿ ಆತಂಕ ಮೂಡಿಸಿದ್ದು, ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಬ್ಯಾನರ್ ವಿವಾದದ ಹಿನ್ನೆಲೆ: ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ, ಸಚಿವ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಬ್ಯಾನರ್‌ಗಳನ್ನು ಶಿಡ್ಲಘಟ್ಟ ನಗರದಲ್ಲಿ ಅಳವಡಿಸಿದ್ದರು. ನಗರದ ರಸ್ತೆ ಮಧ್ಯೆ ಹಾಕಲಾಗಿದ್ದ ಒಂದು ಬ್ಯಾನರ್‌ನಿಂದ ಅಪಘಾತ ಸಂಭವಿಸಿದೆ ಎಂಬ ದೂರು ನಗರಸಭೆಗೆ ಬಂದ ಹಿನ್ನೆಲೆಯಲ್ಲಿ, ನಗರಸಭೆ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಂಡು ಆ ಬ್ಯಾನರ್ ಅನ್ನು ತೆರವು ಮಾಡಿದ್ದರು.
ಇದನ್ನೂ ಓದಿ: ಭೀಕರ ರೈಲು ದುರಂತ: ರೈಲಿನ ಮೇಲೆ ಕ್ರೇನ್ ಕುಸಿದು 22 ಪ್ರಯಾಣಿಕರು ಮೃತ್ಯು
ಪೌರಾಯುಕ್ತೆಗೆ ಫೋನ್‌ನಲ್ಲಿ ಬೆದರಿಕೆ: ಈ ಬ್ಯಾನರ್ ತೆರವು ಕಾರ್ಯಾಚರಣೆಯಿಂದ ಕೋಪಗೊಂಡ ರಾಜೀವ್ ಗೌಡ ಅವರು, ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, “ನಗರಸಭೆಗೆ ಬೆಂಕಿ ಹಾಕಿಸುತ್ತೇನೆ” “ದಂಗೆ ಮಾಡಿಸುತ್ತೇನೆ” ಎಂಬ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಸಿಬ್ಬಂದಿಯಲ್ಲಿ ಭಯ – ನಗರಸಭೆ ಮುಂದೆ ಪ್ರತಿಭಟನೆ: ಕಾಂಗ್ರೆಸ್ ಮುಖಂಡನ ಈ ಬೆದರಿಕೆಗಳಿಂದ ನಗರಸಭೆಯ ಸಿಬ್ಬಂದಿ ಭಯಭೀತರಾಗಿದ್ದು, ತಮ್ಮ ಸುರಕ್ಷತೆ ಹಾಗೂ ಆಡಳಿತಾಧಿಕಾರಿಗಳ ಗೌರವ ಕಾಪಾಡುವಂತೆ ಆಗ್ರಹಿಸಿ ಇಂದು ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು, ಜನಪ್ರತಿನಿಧಿಗಳಾಗಲಿ, ರಾಜಕೀಯ ನಾಯಕರಾಗಲಿ ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಾಳಿಪಟದ ದಾರ ಕುತ್ತಿಗೆ ಕೊಯ್ದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಆಡಳಿತದ ಗೌರವಕ್ಕೆ ಧಕ್ಕೆ?: ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ತೆಗೆದುಕೊಂಡ ಕ್ರಮಕ್ಕೆ ರಾಜಕೀಯ ಒತ್ತಡ ಹಾಗೂ ಬೆದರಿಕೆಗಳು ಎದುರಾಗುತ್ತಿರುವುದು ಆಡಳಿತಾತ್ಮಕ ಸ್ವಾತಂತ್ರ್ಯ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರತ್ತ ಸಾರ್ವಜನಿಕರ ಗಮನ ನೆಟ್ಟಿದೆ.























