ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಹನೂರು ತಾಲೂಕಿನ ಶ್ರೀಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಘಟನೆಯಲ್ಲಿ ಬಾಲಕನೊಬ್ಬ ಗಾಯಗೊಂಡಿದ್ದಾನೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಭೂವಳ್ಳಿ ಗ್ರಾಮದ ಶ್ರೇಯಸ್ (8) ಗಾಯಗೊಂಡ ಬಾಲಕ. ಕುಟುಂಬದವರೊಂದಿಗೆ ಪಾದಯಾತ್ರೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಶ್ರೇಯಸ್ ಹೋಗುತ್ತಿದ್ದಾಗ ಮಂಗಳವಾರ ಬೆಳಗ್ಗೆ ಬೆಟ್ಟದ 7ನೇ ತಿರುವಿನಲ್ಲಿ ಚಿರತೆ ಪಾದಯಾತ್ರಿಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ಎಲ್ಲರೂ ಜೋರಾಗಿ ಕಿರುಚಾಡಿದಾಗ ಚಿರತೆ ಸ್ಥಳದಿಂದ ಓಡಿ ಹೋಗಿದೆ. ಘಟನೆಯಿಂದ ಶ್ರೇಯಸ್‌ನ ಕಿವಿ, ಕೈಗಳಿಗೆ ಪರಚಿದ ಗಾಯಗಳಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ನೀಡಿ, ಬಾಲಕ ಹಾಗೂ ಆತನ ಕುಟುಂಬಸ್ಥರನ್ನು ಬಸ್‌ನಲ್ಲಿ ಬೆಟ್ಟಕ್ಕೆ ಕಳುಹಿಸಿ, ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಜ. 21ರಂದು ಮಹದೇಶ್ವರ ಬೆಟ್ಟದ ರಂಗಸ್ವಾಮಿ ಹೊಡ್ಡುವಿನ ಬಳಿ ಚಿರತೆ ದಾಳಿಗೆ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಮೃತಪಟ್ಟಿದ್ದರು. ಈಗ ಮತ್ತೆ ಚಿರತೆ ದಾಳಿಯಾಗುವುದರಿಂದ ಪಾದಯಾತ್ರಿಗಳಲ್ಲಿ ಭಯ ಉಂಟು ಮಾಡಿದೆ.























