ಬೀದರ್: ಡಿಜಿಟಲ್ ವಂಚನೆಗೆ ₹ 31 ಲಕ್ಷ ಕಳೆದುಕೊಂಡ ಮಾಜಿ ಶಾಸಕ

0
49

ಬೀದರ್: ಜಿಲ್ಲೆಯ ಔರಾದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ಬಿರಾದಾರ್ (ವಕೀಲ್) ಡಿಜಿಟಲ್ ವಂಚನೆಗೆ ಒಳಗಾಗಿ ತದ್ರೂಪಿ (ನಕಲಿ) ಕೋರ್ಟ್ ಕಲಾಪದ ಹೊರತಾಗಿ ಕೂಡ ಆಗಸ್ಟ್ 12 ರಿಂದ 19ರವರೆಗೆ ಒಟ್ಟು 30.99 ಲಕ್ಷ ರೂ.ಗಳನ್ನು ಕಳೆದುಕೊಂಡ ಕುತೂಹಲಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿಯ ಅಪರೂಪದ ಪ್ರಕರಣ ಎಂದೇ ಸೈಬರ್ ಅಪರಾಧ ಲೋಕದಲ್ಲಿ ವ್ಯಾಖ್ಯಾನಿಸಲಾಗುತ್ತಲಿದೆ.

ಪ್ರಕರಣದ ಹಿನ್ನೆಲೆ: ನೀರಜ್ ಕುಮಾರ್ ಎಂಬ ಹೆಸರಿನ ವಂಚಕ ಆಗಸ್ಟ್ 12ರಂದು ಸೆಲ್ ಫೋನ್ ಸಂಖ್ಯೆ 84649 88135 ನಿಂದ ನನಗೆ ಕರೆ ಮಾಡಿದ ಎಂದು ಬಿರಾದಾರ್ ರಾಜಧಾನಿಯಲ್ಲಿಯ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಬೆಂಗಳೂರಿನಲ್ಲಿಯ ಪೊಲೀಸ್ ಮೂಲಗಳು ತಿಳಿಸಿವೆ. ಕರೆ ಮಾಡಿದ ವಂಚಕ ತನ್ನನ್ನು ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡ. ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಮನೆ ಮತ್ತು ಕಚೇರಿ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು ಹಾಗೂ ಡೆಬಿಟ್ ಕಾರ್ಡುಗಳು ಪತ್ತೆಯಾಗಿದ್ದು ನೀವು ಅಕ್ರಮ ಹಣ ವರ್ಗಾವಣೆ ಧಂದೆಯಲ್ಲಿ ಶಾಮೀಲಾಗಿದ್ದೀರಿ ಎಂದು ನನ್ನ ವಿರುದ್ಧ ಆರೋಪ ಮಾಡಿದ ಎಂದು ಬಿರಾದಾರ್ ದೂರು ಅರ್ಜಿಯಲ್ಲಿ ತಿಳಿಸಿದ್ದಾರೆ. ಮುಂಬಯಿನಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ನಿಮ್ಮನ್ನು ದಸ್ತಗಿರಿ ಮಾಡುವುದಾಗಿ ಕೂಡ ಬೆದರಿಸಿದ. ಮೋಸದ ಕರೆ ಇದಾಗಿದೆ ಎಂದು ನನಗೆ ಸಂಶಯ ಬಂದಿತು. ಆದರೆ, ಈ ನಿಟ್ಟಿನಲ್ಲಿ ನನಗೆ ನಂಬಿಕೆ ಬರುವಂತೆ ಮತ್ತು ನನ್ನನ್ನು ಅಂಜಿಸಲು ವಂಚಕ ಬೇರೊಂದು ಕಟ್ಟು ಕಥೆ ಹೆಣದ ಎಂದು ದೂರು ಅರ್ಜಿಯಲ್ಲಿ ಬಿರಾದಾರ್ ಪ್ರಕರಣದ ವೃತ್ತಾಂತ ವಿವರಿಸಿದ್ದಾರೆ.

ನಾನು ಅಮಾಯಕನಾಗಿರುವೆ: ನಾನು ಅಮಯಾಕನಾಗಿರುವೆ ಎಂದು ಗೋಗರೆದರು ಕೂಡ ವಂಚಕ ನನ್ನ ಹಿನ್ನೆಲೆ ವಿವರಗಳನ್ನು ಮತ್ತು ನಾನು ಹೊಂದಿರುವ ಆಸ್ತಿ ವಿವರಗಳನ್ನು ವಂಚಕ ಸಂಗ್ರಹಿಸಿದ. ಬಳಿಕ ವಂಚಕ ಫೋನ್ ಕರೆಯನ್ನು ಇನ್ನೋರ್ವ ಹಿರಿಯ ತನಿಖಾ ಅಧಿಕಾರಿಗೆ ವರ್ಗಾಯಿಸುವುದಾಗಿ ನನಗೆ ತಿಳಿಸಿದ. ವಿಚಾರಣೆಯಿಂದ ನನಗೆ ವಿನಾಯಿತಿ ನೀಡಬೇಕು ಎಂದು ನಾನು ನುಡಿದಾಗ ನಿಮ್ಮ ವಯಸ್ಸು ಮತ್ತು ಹಿನ್ನಲೆ ವಿವರಗಳನ್ನು ಪರಿಗಣಿಸಿ ವರ್ಚುವಲ್ ತನಿಖೆ ನಡೆಸುವುದಾಗಿ ವಂಚಕ ತಿಳಿಸಿದ. ನಾನು ವ್ಯಾಟ್ಸಪ್ ಕಾಲ್‌ನ ನಿಗಾದಲ್ಲಿದ್ದೆ. ಅತ್ಯಂತ ಸೂಕ್ಷ್ಮ ಪ್ರಕರಣ ಇದಾಗಿದ್ದು ಈ ಬಗ್ಗೆ ಬೇರೆ ಯಾರಿಗೂ ಕೂಡ ಮಾಹಿತಿ ನೀಡದಂತೆ ವಂಚಕ ನನಗೆ ಬೆದರಿಕೆಯೊಡ್ಡಿದ. ವಂಚಕರು ತಮ್ಮ ಗುರುತಿನ ಚೀಟಿಗಳನ್ನು, ಬಂಧನದ ವಾರೆಂಟ್‌ನ್ನು ಮತ್ತು ನನ್ನ ವಿರುದ್ಧ ದಾಖಲಿಸಲಾದ ಪ್ರಕರಣದ ಪ್ರತಿಯನ್ನು ನನಗೆ ತೋರಿಸಿದರು. ವಂಚಕರು ವಿಡಿಯೋ ಕಾಲ್ ಸಂದರ್ಭದಲ್ಲಿ ತದ್ರೂಪಿ ಪೊಲೀಸ್ ಠಾಣೆಯನ್ನು ತೋರಿಸಿದರು. ಮಾರನೆ ದಿನ ವಂಚಕರು ನನ್ನನ್ನು ವಿಡಿಯೋ ಕಾಲ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಿದರು. ಪೊಲೀಸರ ಮತ್ತು ನನ್ನ ವಾದ ಆಲಿಸಿದ ಬಳಿಕ ನಾನು ವಂಚನೆ ಪ್ರಕರಣದಲ್ಲಿ ತಪ್ಪಿತಸ್ತನಲ್ಲ ಎಂದು ಲಿಖಿತ ರೂಪದಲ್ಲಿ ನೀಡುವಂತೆಯೂ ಮತ್ತು ಪೊಲೀಸರು ತಿಳಿಸಿದ ಬ್ಯಾಂಕ್ ಖಾತೆಗೆ 10.99 ಲಕ್ಷ ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ಸಂದಾಯ ಮಾಡುವಂತೆ ಜಡ್ಜ್ ನನಗೆ ಆದೇಶಿಸಿದರು.

ನಾನು ಆದೇಶ ಪಾಲಿಸಿದೆ. ಆಗಸ್ಟ್ 14 ರಿಂದ ನೀರಜ್ ಕುಮಾರ್ ಮತ್ತು ಇನ್ನೋರ್ವ ಅಧಿಕಾರಿ ಸಂದೀಪ್ ಕುಮಾರ್ ನನ್ನನ್ನು ವಿಡಿಯೋ ಕಾಲ್ ಮೂಲಕ ಪ್ರತಿ ದಿನ ವಿಚಾರಣೆ ನಡೆಸಿ ನನ್ನ ಕುಟುಂಬದ ಸದಸ್ಯರ, ಅವರ ಬ್ಯಾಂಕ್ ಖಾತೆಗಳ ವಿವರಗಳನ್ನು ಮತ್ತು ಇತರೆ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿದರು. ನಾಲ್ಕು ದಿನಗಳ ಬಳಿಕ ಕ್ಯಾಮೆರಾ ಮೂಲಕ ಜಡ್ಜ್ ಮುಂದೆ ನನ್ನನ್ನು ಹಾಜರುಪಡಿಸಲಾಯಿತು. ಜಾರಿ ನಿರ್ದೇಶನಾಲಯದ ಮತ್ತು ಸಿಬಿಐ ಅಧಿಕಾರಿಗಳು ನಿಮ್ಮ ಆಸ್ತಿಗಳ ಮತ್ತು ಬ್ಯಾಂಕ್ ಖಾತೆಗಳ ತನಿಖೆ ನಡೆಸಲು 20 ಲಕ್ಷ ರೂ.ಗಳ ಠೇವಣಿ ಜಮಾ ಮಾಡುವಂತೆ `ಜಡ್ಜ್’ ನನಗೆ ನಿರ್ದೇಶನ ನೀಡಿದರಲ್ಲದೆ ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ಬಳಿಕ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದರು. ಇನ್ನೊಂದು ಖಾತೆಗೆ ಆಗಸ್ಟ್ 18 ರಂದು ಆರ್‌ಟಿಜಿಎಸ್ ಮೂಲಕ 20 ಲಕ್ಷ ರೂ.ಗಳನ್ನು ನಾನು ಜಮೆ ಮಾಡಿದೆ. ಹೀಗೆ ನನಗೇ ಅರಿವು ಇಲ್ಲದಂತೆ ಹಂತ-ಹಂತವಾಗಿ ನಾನು ಸಂಪೂರ್ಣ ವಂಚನೆಗೆ ಒಳಗಾಗಿ ದುಡ್ಡು ಕಳೆದುಕೊಂಡೆ. ಎರಡು ದಿನಗಳ ಬಳಿಕ ನಾನು ವಂಚನೆಗೆ ಒಳಗಾಗಿರುವುದು ನನಗೆ ಮನವರಿಕೆಯಾಯಿತು. ಈ ಬಗ್ಗೆ ನಾನು ನನ್ನ ಕುಟುಂಬದ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ತಿಳಿಸಿದೆ ಎಂದು ಬಿರಾದಾರ್ ರಾಜಧಾನಿಯಲ್ಲಿನ ಸೈಬರ್ ಠಾಣೆ ಪೊಲೀಸರಿಗೆ ನೀಡಿದ ದೂರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲು: ಪೊಲೀಸರು ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್‌ಎಸ್ 318 ಮತ್ತು 319 ಸೆಕ್ಷನ್‌ಗಳ ಪ್ರಕಾರ ಮೋಸ, ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ರಾಜಧಾನಿಯಲ್ಲಿನ ಪೊಲೀಸ್ ಮೂಲಗಳು ವಂಚನೆಯ ಪ್ರಕರಣದ ವೃತ್ತಾಂತ ತಿಳಿಸಿವೆ. ಈ ಕುರಿತಾದ ಮಾಹಿತಿ ಹೆಕ್ಕಲು `ಸಂಯುಕ್ತ ಕರ್ನಾಟಕ’ ಸ್ಥಳೀಯ ಪೊಲೀಸರಿಗೆ ಫೋನಾಯಿಸಿದಾಗ ನಮ್ಮ ಬಳಿ ದಾಖಲಾದ ಪ್ರಕರಣ ಇದಲ್ಲ. ನಿಮಗೆ ಬೇಕಿದ್ದರೆ ಪ್ರಕರಣದ ಮಾಹಿತಿ ತರಿಸಿ ಕೊಡುತ್ತೇವೆ ಎಂದು ಹೇಳಿದರು.

Previous articleಆರೋಗ್ಯ ಇಲಾಖೆ ನೇಮಕಾತಿ: ಮಹತ್ವದ ಸೂಚನೆಗಳು
Next articleಬೆಳಗಾವಿ: ಬಿಡಿಸಿಸಿ ಬ್ಯಾಂಕ್ ಚುನಾವಣೆ, ಜಾರಕಿಹೊಳಿಯವರ ಸಂಧಾನ ರಾಜಕೀಯ

LEAVE A REPLY

Please enter your comment!
Please enter your name here