ಬೀದರ್: ಹಿರಿಯ ರಾಜಕೀಯ ಮುತ್ಸದ್ಧಿ, ಲೋಕನಾಯಕ, ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ, ಡಾ.ಭೀಮಣ್ಣ ಖಂಡ್ರೆ (103) ಅಂತ್ಯಕ್ರಿಯೆ ಭಾಲ್ಕಿಯಲ್ಲಿ ಶನಿವಾರ ಸಂಜೆ ಜನಸಾಗರದ ಮಧ್ಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಪಾರ ಜನಸ್ತೋಮದ ಮಧ್ಯೆ ಶನಿವಾರ ಸಂಜೆ ಭಾಲ್ಕಿಯಲ್ಲಿ ನಡೆಯಿತು.
ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಖಂಡ್ರೆ ನಿಧನರಾಗಿದ್ದರು. ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಭಾಲ್ಕಿ ಮನೆಯಲ್ಲಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಡಿಸಿ ಶಿಲ್ಪಾ ಶರ್ಮಾ ಅವರು ತಿರಂಗಾ ಧ್ವಜ ಅಗಲಿದ ಚೇತನಕ್ಕೆ ಹೊದಿಸಿ, ಜಿಲ್ಲಾಡಳಿತದಿಂದ ಗೌರವ ಪುಷ್ಪನಮನ ಸಲ್ಲಿಸಿದರು. ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಚಿಕಲಚಂದಾ ರಸ್ತೆಯ ಅವರ ತೋಟ ಶಾಂತಿಧಾಮಕ್ಕೆ ಒಯ್ದು, ಧರ್ಮಪತ್ನಿ ಲಿಂ.ಲಕ್ಷ್ಮೀಬಾಯಿ ಖಂಡ್ರೆ ಸಮಾಧಿ ಪಕ್ಕದಲ್ಲೇ ವೀರಶೈವ-ಲಿಂಗಾಯತ ಪರಂಪರೆಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ಸಚಿವರು, ಶಾಸಕರು, ನಾಡಿನ ಅನೇಕ ಪೂಜ್ಯರು, ಗಣ್ಯರು ಸೇರಿ ಒಂದು ಲಕ್ಷಕ್ಕೂ ಹೆಚ್ಚು ಜನರು ಅಂತಿಮ ದರ್ಶನ ಪಡೆದರು. ಪುತ್ರರಾದ ಅರಣ್ಯ ಸಚಿವ ಈಶ್ವರ ಖಂಡ್ರೆ ವಿಧಿ-ವಿಧಾನ ಕೈಂಕರ್ಯ ನಡೆಸಿ, ತಮ್ಮ ರಾಜಕೀಯ ಗುರು ಆಗಿದ್ದ ತಂದೆಗೆ ಕಣ್ಣೀರ ವಿದಾಯ ಹೇಳಿದರು.
ಖಂಡ್ರೆ ಮನೆ ಗುರುಗಳಾದ ಭಾಲ್ಕಿ ಹಿರೇಮಠದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಧಾರ್ಮಿಕ ಪ್ರಕ್ರಿಯೆ ಮುಗಿಸಿದರು. ಖಂಡ್ರೆ ಮೊಮ್ಮಗ ಸಂಸದ ಸಾಗರ್ ಖಂಡ್ರೆ ಸೇರಿ ಕುಟುಂಬದ ಸದಸ್ಯರು ಅಗಲಿದ ಚೇತನಕ್ಕೆ ಆರತಿ ಬೆಳಗಿ, ಭಾವುಕ ವಿದಾಯ ಹೇಳಿದರು. ಪೊಲೀಸ್ ತುಕುಡಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲಾಮಿ ನೀಡಿತು. ಮೃತರ ಗೌರವಾರ್ಥ ಭಾಲ್ಕಿ ಪಟ್ಟಣ ಸ್ವಯಂಘೋಷಿತ ಬಂದ್ ಇತ್ತು.






















