ಬೀದರ್: ಬೀದರ್ ಜಿಲ್ಲೆಯ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (ಪಶು ವಿವಿ) ಸಾಮಾಗ್ರಿಗಳ ಖರೀದಿಯಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬೃಹತ್ ದಾಳಿ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಬೀದರ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಒಂದೇ ಸಾರಿ 25 ಕಡೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಭ್ರಷ್ಟ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಉದ್ಯಮಿಗಳಿಗೆ ಶಾಕ್ ನೀಡಲಾಗಿದೆ.
ಯಾವೆಲ್ಲ ಕಡೆ ದಾಳಿ?: ಲೋಕಾಯುಕ್ತ ತಂಡಗಳು ಪಶು ವಿವಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಎಂಟರ್‌ಪ್ರೈಸಸ್ ಉದ್ಯಮಿಗಳ ಮನೆಗಳು, ಕಚೇರಿಗಳು ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಭ್ರಷ್ಟಾಚಾರ ಸಂಬಂಧಿಸಿದ ಪ್ರಮುಖ ದಾಖಲೆಗಳು, ನಕಲಿ ಬಿಲ್‌ಗಳು, ಹಣದ ವ್ಯವಹಾರಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಕರ್ನಾಟಕದ 69 ಕಡೆ ದಾಳಿ: ಬೀದರ್ ಜಿಲ್ಲೆ 25 ಕಡೆ ಸೇರಿದಂತೆ ಬೆಂಗಳೂರು, ಕೊಪ್ಪಳ, ಚಿಕ್ಕಮಗಳೂರು, ಹಾಸನ, ರಾಮನಗರ, ಕೋಲಾರ, ಉಡುಪಿ ಸೇರಿದಂತೆ ರಾಜ್ಯಾದ್ಯಂತ 69 ಕಡೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎನ್ನಲಾಗಿದೆ
ಆರೋಪಗಳ ಹಿನ್ನಲೆ: ಪಶು ವಿವಿಯ ಕಾಮಗಾರಿ ಹಾಗೂ ಸಾಮಾಗ್ರಿಗಳ ಖರೀದಿಯಲ್ಲಿ ಅಕ್ರಮ ಬಿಲ್‌ಗಳನ್ನು ತಯಾರಿಸಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆದಿದೆ.
ಪರಿಶೀಲನೆ ತೀವ್ರಗೊಳಿಸಿದ ತಂಡ: ಲೋಕಾಯುಕ್ತ ಪೊಲೀಸರು ಸಂಬಂಧಪಟ್ಟ ಅಧಿಕಾರಿಗಳ ಆಸ್ತಿ-ಪಾಸ್ತಿ, ದಾಖಲೆಗಳು ಮತ್ತು ಬಿಲ್‌ಗಳನ್ನು ಕ್ರಾಸ್ ಚೆಕ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಂಧನ ಮತ್ತು ಹೆಚ್ಚಿನ ತನಿಖೆಯ ಸಾಧ್ಯತೆಯಿದೆ.