ಬೀದರ್: ಹಿರಿಯ ರಾಜಕಾರಣಿ ಭೀಮಣ್ಣ ಖಂಡ್ರೆ ಅವರು ಸಮಾಜಮುಖಿಯಾದ ಸಾರ್ಥಕ ಜೀವನವನ್ನು ನಡೆಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಸಚಿವರೂ, ಶತಾಯುಷಿ ಆಗಿದ್ದ ಹಿರಿಯ ಕಾಂಗ್ರೆಸ್ ಧುರೀಣ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದರು.
ಭೀಮಣ್ಣ ಖಂಡ್ರೆ ಒಬ್ಬ ಹೋರಾಟಗಾರರು. ಅನ್ಯಾಯದ ವಿರುದ್ಧ ಸದಾ ಹೋರಾಡಿದವರು. ಸ್ವಾತಂತ್ರ್ಯ ಚಳುವಳಿಯಿಂದ ಪ್ರೇರಿತರಾಗಿ, ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡವರು ಎಂದರು.
ಇದನ್ನೂ ಓದಿ: ಶಿರೂರು ಪರ್ಯಾಯ – ಕೃಷ್ಣ ನಗರಿಯಲ್ಲಿ ಹಬ್ಬದ ಸಂಭ್ರಮ
ನ್ಯಾಯ ಪರವಾದ ಧ್ವನಿ: ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿ, ಏಕೀಕರಣದಲ್ಲಿ ಭಾಗವಹಿಸಿದ್ದರು. ಜನಪರವಾದ ಹೋರಾಟಗಾರ ಎಂದೇ ಗುರುತಿಸಿಕೊಂಡಿದ್ದ ಅವರು ಅನ್ಯಾಯವಾದ ಕಡೆಗೆಲ್ಲಾ ತೆರಳಿ ನ್ಯಾಯದ ಪರವಾಗಿ ಧ್ವನಿ ಎತ್ತಿದವರು ಎಂದರು.
ಬೀದರ್ ಇಂದು ಕರ್ನಾಟಕದಲ್ಲಿ ಉಳಿದಿದ್ದರೆ, ಭೀಮಣ್ಣ ಖಂಡ್ರೆ ಅವರು ಏಕೀಕರಣಕ್ಕಾಗಿ ಹೋರಾಟ ಮಾಡಿದ್ದರ ಫಲ ಎಂದ ಅವರು ಭೀಮಣ್ಣ ಖಂಡ್ರೆ ಕೇವಲ ರಾಜಕಾರಣಿಯಾಗಿರದೇ ಸಮಾಜಸೇವಕರೂ ಆಗಿದ್ದರು. ದೀರ್ಘಕಾಲ ಸಮಾಜ ಸೇವೆಯಲ್ಲಿ ತೊಡಗಿದ್ದರು. ಎಲ್ಲ ವರ್ಗದ ಜನರನ್ನು ಪ್ರತಿನಿಧಿಸುವ ಛಾತಿ ಅವರಲ್ಲಿತ್ತು ಎಂದರು.
ಇದನ್ನೂ ಓದಿ: ಗಣರಾಜ್ಯೋತ್ಸವ: ಕಾಫಿನಾಡಿನ ಯುವ ವಿಜ್ಞಾನಿಗೆ ರಾಷ್ಟ್ರಪತಿ ಆಹ್ವಾನ
ಯುವಜನಾಂಗಕ್ಕೆ ದಾರಿದೀಪ: ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಖಂಡ್ರೆ ಅವರು ನಮಗೆ ಸ್ಫೂರ್ತಿಯಾಗಿದ್ದರು. ಅವರ ಬದುಕಿನ ರೀತಿ ಯುವಕರಿಗೆ ದಾರಿದೀಪ ಎಂದರು.
ಭೀಮಣ್ಣ ಖಂಡ್ರೆ ಅವರ ಸಾವಿನಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದರು.








