ಬೀದರ್‌: KDP ಸಭೆಯಲ್ಲೇ ಕೈ ಕೈ ಮಿಲಾಯಿಸಿದ ಮುಖಂಡರು

0
3

ಬೀದರ್: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ಭಾರೀ ಗದ್ದಲಕ್ಕೆ ಕಾರಣವಾಯಿತು. ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವೆ ಕೈ ಕೈ ಮಿಲಾಯಿಸಿ ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದನೆ ನಡೆದ ಪರಿಣಾಮ ಸಭೆಯನ್ನೇ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಹುಮನಾಬಾದ್ ಮತಕ್ಷೇತ್ರ ವ್ಯಾಪ್ತಿಯ ಅರಣ್ಯ ಜಮೀನು ಸಂಬಂಧಿತ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಈ ವೇಳೆ ಡಾ. ಸಿದ್ದಲಿಂಗಪ್ಪ ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾಗ, ಅದನ್ನು ತೀವ್ರವಾಗಿ ವಿರೋಧಿಸಿದ ಎಂಎಲ್‌ಸಿ ಭೀಮರಾವ್ ಪಾಟೀಲ್ ತಮ್ಮ ಆಸನದಿಂದ ಎದ್ದು ಶಾಸಕರತ್ತ ಧಾವಿಸಿದರು. ಮಾತಿನ ಚಕಮಕಿ ಕ್ಷಣಾರ್ಧದಲ್ಲೇ ಕೈಕಾಲು ಜೋಡಿಸುವ ಮಟ್ಟಕ್ಕೆ ತಲುಪಿದ್ದು, ಇಬ್ಬರೂ ಜೋರು ಧ್ವನಿಯಲ್ಲಿ ಅವಾಚ್ಯ ಪದಗಳನ್ನು ಬಳಸಿ ಪರಸ್ಪರ ನಿಂದಿಸಿಕೊಂಡರು.

ಇದನ್ನೂ ಓದಿ:  ಬಜೆಟ್ ನಂತರ ಅಧಿಕಾರ ಹಂಚಿಕೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಈ ಸಂದರ್ಭದಲ್ಲಿ ಭೀಮರಾವ್ ಪಾಟೀಲ್ ಅವರ ಸಹೋದರ ಹಾಗೂ ಎಂಎಲ್‌ಸಿಯಾದ ಡಾ. ಚಂದ್ರಶೇಖರ್ ಪಾಟೀಲ್ ಕೂಡ ಸ್ಥಳಕ್ಕೆ ತೆರಳಿ ಬೆಂಬಲಕ್ಕೆ ನಿಂತರು. ಪರಿಸ್ಥಿತಿ ಕೈಮೀರುವ ಹಂತ ತಲುಪುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದರು.

ಅನಂತರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ವೇದಿಕೆಯಿಂದ ಕೆಳಗಿಳಿದು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೂ ಸಭೆಯ ವಾತಾವರಣ ಸಹಜ ಸ್ಥಿತಿಗೆ ಬರದ ಹಿನ್ನೆಲೆಯಲ್ಲಿ, ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಯಾವುದೇ ಪ್ರಗತಿ ಪರಿಶೀಲನೆ ಇಲ್ಲದೇ ಸಭೆ ಮೊಟಕುಗೊಂಡಿತು.

ಇದನ್ನೂ ಓದಿ:  ವೆನೆಜುವೆಲಾ ಆಪರೇಷನ್ ಬಳಿಕ ಭಾರತದ ಮೇಲೆ ಮತ್ತಷ್ಟು ಸುಂಕದ ಸುಳಿವು ನೀಡಿದ ಟ್ರಂಪ್

ಸಭೆಯಲ್ಲಿ ನಡೆದ ಈ ಅವಮಾನಕರ ಘಟನೆ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಶಾಸಕರ ತವರು ಕ್ಷೇತ್ರವಾದ ಹುಮನಾಬಾದ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಎಂಎಲ್‌ಸಿ ಭೀಮರಾವ್ ಪಾಟೀಲ್ ಮನೆಗಳ ಎದುರು ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಉದ್ವಿಗ್ನತೆ ಹೆಚ್ಚಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹುಮನಾಬಾದ್ ಪಟ್ಟಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದೆ.

Previous articleಮೇಕ್ ಇನ್ ಕರ್ನಾಟಕ : ರನ್‌ವೇ ಸುರಕ್ಷತಾ ವಾಹನ ಉತ್ಪಾದನೆ ಆರಂಭ