Home ನಮ್ಮ ಜಿಲ್ಲೆ ಬೀದರ್ ಡಿಸಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ಡಿಸಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

0
15

ಬೀದರ್: ಬೀದರ್ ಜಿಲ್ಲೆಯ ಡಿಸಿ ಕಚೇರಿಗೆ ಇ-ಮೇಲ್ ಮೂಲಕ ಬಂದಿರುವ ಬಾಂಬ್ ಬೆದರಿಕೆ ಸಂದೇಶ ಸ್ಥಳೀಯ ಆಡಳಿತ ಮತ್ತು ಪೊಲೀಸರನ್ನು ಗಾಬರಿಗೊಳಿಸಿದೆ. ಬೆಳಗ್ಗೆ ಬಂದ ಈ ಸಂದೇಶದ ನಂತರ, ಜಿಲ್ಲಾಧಿಕಾರಿ ಕಚೇರಿ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ತಪಾಸಣೆ ಕಾರ್ಯ ಆರಂಭಿಸಿದೆ.

ಚಿಕ್ಕಪೇಠ್‌ನಲ್ಲಿರುವ ಡಿಸಿ ಕಚೇರಿಗೆ ಬಂದ ಬೆದರಿಕೆ ಇಮೇಲ್: ಬೀದರ್ ನಗರದ ಚಿಕ್ಕಪೇಠ್‌ನಲ್ಲಿ ಇರುವ ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಇ-ಮೇಲ್‌ಗೆ “ಬಾಂಬ್ ಇಟ್ಟಿರುವುದು” ಎಂಬ ಸಂದೇಶ ಬಂದಿದೆ. ಕಚೇರಿ ಸಿಬ್ಬಂದಿಯನ್ನು ತಕ್ಷಣ ಹೊರಗೆ ಕಳುಹಿಸಿ,ಸಂಪೂರ್ಣ ಕಟ್ಟಡವನ್ನು ಖಾಲಿ ಮಾಡಲಾಗಿದ್ದು, ಪೊಲೀಸರು ಕಚೇರಿಯ ಒಳಹೊರಗೆ ವಿಸ್ತೃತ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸ್ಥಳಕ್ಕೆ ಎಎಸ್ಪಿ ಚಂದ್ರಕಾಂತ್ ಪೂಜಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಶಿರಡಿ ಸಾಯಿಬಾಬಾ ಸನ್ನಿಧಿಗೆ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ

ಪೊಲೀಸ್ ಅಧಿಕಾರಿಗಳ ಪ್ರಕಾರ: ಕಚೇರಿಯಲ್ಲಿನ ಪ್ರತಿಯೊಂದು ಕೋಣೆ, ದಾಖಲೆ ಕೊಠಡಿ, ವಾಹನ ನಿಲ್ದಾಣ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿ ಪರಿಶೀಲನೆ ನಡೆದಿದೆ. ಇದುವರೆಗೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಇದು ಹೆದರಿಸಲು ಮಾಡಿದ ಕೃತ್ಯವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಯಾವುದೇ ಅಪಾಯವನ್ನೂ ನಿರ್ಲಕ್ಷ್ಯ ಮಾಡದೆ, ಕಚೇರಿಯ ಸುತ್ತಮುತ್ತ ಭದ್ರತೆ ಒದಗಿಸಲಾಗಿದೆ.

ಕೋಲಾರದಲ್ಲೂ ತನಿಖೆ ಆರಂಭ: ಇಮೇಲ್‌ನಲ್ಲಿ ಕೋಲಾರ ಜಿಲ್ಲಾಧಿಕಾರಿ ಕಚೇರಿಗೂ ಬೆದರಿಕೆ ಉಲ್ಲೇಖವಾಗಿರುವುದರಿಂದ, ಆ ಪ್ರದೇಶದಲ್ಲೂ ಭದ್ರತೆ ಹೆಚ್ಚಿಸಲಾಗಿದೆ, ಸ್ಥಳೀಯ ಪೊಲೀಸರಿಂದ ಪರಿಶೀಲನೆ ಜರುಗುತ್ತಿದೆ. ಸೈಬರ್ ಕ್ರೈಂ ಯುನಿಟ್ ಚುರುಕುಗೊಂಡಿದೆ
ಇಮೇಲ್ ಮೂಲದ ಬಗ್ಗೆ ಸಾಕ್ಷ್ಯ ಸಂಗ್ರಹಿಸಲು ಸೈಬರ್ ಕ್ರೈಂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.