Home Advertisement
Home ನಮ್ಮ ಜಿಲ್ಲೆ ಬೆಂಗಳೂರು ರಾಜ್ಯವು ಸಮಸ್ಯೆಗಳ ಸರಮಾಲೆಯಿಂದ ತುಂಬಿ ಹೋಗಿದೆ

ರಾಜ್ಯವು ಸಮಸ್ಯೆಗಳ ಸರಮಾಲೆಯಿಂದ ತುಂಬಿ ಹೋಗಿದೆ

0
6

ಬೆಂಗಳೂರು: “ರಾಜ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ, ಎಲ್ಲವೂ ಸುಭಿಕ್ಷವಾಗಿದೆ” ಎಂದು ರಾಜ್ಯ ಸರ್ಕಾರವು ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸುವ ಪ್ರಯತ್ನ ಮಾಡಿರುವುದು ಪ್ರಜಾಪ್ರಭುತ್ವದ ದುರಂತ. ವಾಸ್ತವದಲ್ಲಿ ಕರ್ನಾಟಕ ರಾಜ್ಯವು ಸಮಸ್ಯೆಗಳ ಸರಮಾಲೆಯಿಂದ ತುಂಬಿ ಹೋಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭಾ ಅಧಿವೇಶನದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಮಾತನಾಡಿದ ಅವರು, ಕಳೆದ ಎರಡೂವರೆ ವರ್ಷಗಳಿಂದ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಆದರೆ ಸರ್ಕಾರ ಮಾತ್ರ ಎಲ್ಲವೂ ಚೆನ್ನಾಗಿದೆ ಎಂಬಂತೆ ಚಿತ್ರಣ ನೀಡುತ್ತಿದೆ ಎಂದು ಆರೋಪಿಸಿದರು.

ನಗರ ಪ್ರದೇಶಗಳಲ್ಲಿ ಜೈಲ್ ಜಾಮರ್ ಹಾಗೂ ಇ-ಖಾತಾ ಸಮಸ್ಯೆಗಳು ಗಂಭೀರವಾಗಿ ಕಾಡುತ್ತಿದ್ದು, ಜನರು ಸರ್ಕಾರಕ್ಕೆ ಛೀಮಾರಿ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಫ್ರೀ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಸರ್ಕಾರ ಇದೀಗ ರೇಷನ್ ಅಂಗಡಿಗಳ ಮುಂದೆ ‘ನೋ ಸ್ಟಾಕ್’ ಬೋರ್ಡ್ ಹಾಕಿಸಿದೆ. ನನ್ನ ಮತಕ್ಷೇತ್ರದಲ್ಲಿಯೇ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ವೇದವ್ಯಾಸ ಕಾಮತ್ ಆರೋಪಿಸಿದರು.

ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಮೀನುಗಾರರ ರಕ್ಷಣೆಗೆ ಅಗತ್ಯವಿರುವ ಸೀ ಆಂಬುಲೆನ್ಸ್‌ಗಳನ್ನು ಸರ್ಕಾರ ಇನ್ನೂ ಒದಗಿಸಿಲ್ಲ. ಡ್ರೆಜ್ಜಿಂಗ್ ಮಿಷನ್ ಇಲ್ಲ, ಮೀನುಗಾರಿಕಾ ಜಟ್ಟಿ, ಕ್ರೂಸ್, ಫ್ಲೋಟಿಂಗ್ ಜಟ್ಟಿ ಸೇರಿದಂತೆ ಯಾವುದೇ ಯೋಜನೆಯೂ ಸಾಕಾರಗೊಂಡಿಲ್ಲ. ಬಂದರುಗಳ ಲ್ಯಾಂಡ್ ರೆಂಟ್ ದರಗಳನ್ನು ಹೆಚ್ಚಿಸಿರುವ ಪರಿಣಾಮ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ ಎಂದರು.

ಮಂಗಳೂರು ಆಯುಷ್ ಇಲಾಖೆಯ ಔಷಧ ಅಕ್ರಮ, ಅಬಕಾರಿ ಹಗರಣ, ವಾಲ್ಮೀಕಿ ನಿಗಮ ಹಗರಣ, ಮೂಡಾ ಹಗರಣ, ಕಾರ್ಮಿಕ ಇಲಾಖೆಯ ಕಿಟ್ ಹಗರಣ, ಕಸ ಗುಡಿಸುವ ಯಂತ್ರಗಳ ಹಗರಣ ಸೇರಿದಂತೆ ಸರ್ಕಾರದ ವಿರುದ್ಧ ಸಾಲುಸಾಲು ಹಗರಣಗಳು ಬಯಲಾಗಿವೆ. ಅಲ್ಲದೆ, ಎಲ್ಲಾ ಇಲಾಖೆಗಳ ವರ್ಗಾವಣೆಗಳಲ್ಲಿ ಲಂಚಾವತಾರ ನಡೆಯುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.

ಎಸ್‌ಸಿ/ಎಸ್‌ಟಿ ವರ್ಗದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ. ನಾರಾಯಣ ಗುರು ಹಾಗೂ ಬಂಟ ನಿಗಮಗಳಿಗೆ ಅನುದಾನ ನೀಡದೇ ಹಿಂದುಳಿದ ವರ್ಗಗಳಿಗೂ ಸರ್ಕಾರ ಅನ್ಯಾಯ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಮುಖ ಇಟ್ಟುಕೊಂಡು ನಮ್ಮದು ಉತ್ತಮ ಆಡಳಿತ ಎಂದು ರಾಜ್ಯಪಾಲರಿಂದ ಸರ್ಕಾರ ಹೇಳಿಸುತ್ತದೆ? ಎಂದು ವೇದವ್ಯಾಸ ಕಾಮತ್ ಪ್ರಶ್ನಿಸಿದರು.

Previous articleಲಂಚಕೋರ ಇನ್‌ಸ್ಪೆಕ್ಟರ್‌ನ ಹೈಡ್ರಾಮಾ ವೈರಲ್!
Next articleಸಿಜೆ ರಾಯ್‌ ಗ್ಯಾರೇಜ್‌ನಲ್ಲಿವೆ ಐಷಾರಾಮಿ ಕಾರುಗಳು