ವಿಧಾನಸಭೆ: ಕೇಂದ್ರ ಸರ್ಕಾರದ ಹೈಕಮಾಂಡ್ ನಿಂದ ರಾಜ್ಯಪಾಲರಿಗೆ ಫೋನ್ ಬಂದಿರಬಹುದು ಎಂದು ಹೆಚ್.ಕೆ. ಪಾಟೀಲ್ ಅವರು ಊಹೆ ಮೇಲೆ ತಿಳಿಸಿದ್ದಾರೆ ಅಷ್ಟೆ. ನಮ್ಮ ಸರ್ಕಾರ ಯಾರ ಪೋನ್ ಅನ್ನು ಟ್ಯಾಪ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಅವರು ವಿಧಾನಸಭೆಯಲ್ಲಿ ಸ್ಪಷ್ಟ ಪಡಿಸಿದರು.
ಬುಧವಾರ ಮಧ್ಯಾಹ್ನ ಪ್ರಾರಂಭವಾದ ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಉಪ ನಾಯಕರಾದ ಅರವಿಂದ್ ಬೆಲ್ಲದ್ ಹಾಗೂ ಸುರೇಶ್ ಕುಮಾರ್ ಅವರು ರಾಜ್ಯಪಾಲರ ಹುದ್ದೆಗೆ ಎಲ್ಲರೂ ಗೌರವ ನೀಡಬೇಕು. ಆದರೆ ಸದನದಲ್ಲಿ ರಾಜ್ಯಪಾಲರನ್ನು ಅಗೌರವದಿಂದ ನಡೆಸಿಕೊಳ್ಳಲಾಗಿದೆ. ಹಾಗೂ ಹೆಚ್.ಕೆ.ಪಾಟೀಲ್ ಅವರು ರಾಜ್ಯಪಾಲರಿಗೆ ಕೇಂದ್ರದ ಗೃಹ ಸಚಿವರು ಫೋನ್ ಮಾಡಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಸರ್ಕಾರ ರಾಜ್ಯಪಾಲರ ಫೋನ್ ಟ್ಯಾಪಿಂಗ್ ಮಾಡಿಸುತ್ತಿದೆಯೇ ಅಥವಾ ಕೇಂದ್ರ ಗೃಹ ಸಚಿವರು ಫೋನ್ ಮಾಡಿದ್ದರು ಎಂಬುದಕ್ಕೆ ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದರೆ ನಿಮ್ಮ ಹೇಳಿಕೆಯನ್ನು ಹಿಂಪಡೆದು, ಸದನಕ್ಕೆ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ವಿರೋಧ ಪಕ್ಷದವರಿಗೆ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಲು ಇಷ್ಟವಿಲ್ಲ. ಆದ ಕಾರಣ ಸುಮ್ಮನೆ ಇಲ್ಲಸಲ್ಲದ ವಿಷಯಗಳನ್ನು ಪ್ರಸ್ತಾಪ ಮಾಡಿ ಕಾಲಹರಣ ಮಾಡುತ್ತಿದ್ದಾರೆ ಎಂದರು.























