VB-G RAM G ಕಾಯ್ದೆ ರದ್ದಾಗುವವರೆಗೆ ಹೋರಾಟ
ಬೆಂಗಳೂರು: ಮನರೇಗಾ ಕಾಯ್ದೆ ಪುನರ್‌ಸ್ಥಾಪನೆಯಾಗಿ, VB-G RAM G ಕಾಯ್ದೆ ರದ್ದಾಗುವವರೆಗೆ ಹೋರಾಟ ಮುಂದುವರಿಯಲಿದೆ. ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ವ್ಯಾಪಿಸುವ ಜನಾಂದೋಲನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಘೋಷಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ‘ಮನರೇಗಾ ಉಳಿಸಿ ಹೋರಾಟ’ದ ಪೂರ್ವಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಹೋರಾಟದಂತೆ, ಈ ಹೋರಾಟವೂ ಗಟ್ಟಿಯಾಗಿ ನಡೆಯಲಿದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ‘ಜನ ನಾಯಗನ್’ಗೆ ಬೆಂಬಲ ನೀಡಿದ ರಾಹುಲ್ ಗಾಂಧಿ
ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ: ಕಳೆದ ತಿಂಗಳು ನಡೆದ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮನರೇಗಾ ಕಾಯ್ದೆ ರದ್ದು ಮಾಡಿರುವ ವಿಚಾರವನ್ನು ಗಂಭೀರವಾಗಿ ಚರ್ಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯನ್ನು ರದ್ದು ಮಾಡಿ ‘ವಿಬಿಜಿ ರಾಮ್ ಜಿ’ ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿರುವುದು ಗ್ರಾಮೀಣ ಬಡವರ ಹಕ್ಕುಗಳ ಮೇಲೆ ದಾಳಿ ಎಂದು ಅವರು ಆರೋಪಿಸಿದರು.
“ಮಹಾತ್ಮ ಗಾಂಧಿ ಹೆಸರು ಎಂದರೆ ಮನುವಾದಿಗಳಿಗೆ ಅಲರ್ಜಿ. ಗಾಂಧೀಜಿಯ ಹೆಸರಿನಲ್ಲಿದ್ದ ಯೋಜನೆಯನ್ನು ಅಳಿಸಿ ಹಾಕುವ ಪ್ರಯತ್ನ ಇದಾಗಿದೆ” ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: BRICS ಶೃಂಗಸಭೆಯ ಲೋಗೋ, ಥೀಮ್, ವೆಬ್‌ಸೈಟ್ ಬಿಡುಗಡೆ
ಮನರೇಗಾ – ಬಡವರ ಮೂಲಭೂತ ಹಕ್ಕು: ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಮನರೇಗಾ ಕಾಯ್ದೆಯನ್ನು ಗ್ರಾಮೀಣ ಬಡವರಿಗೆ ಕೆಲಸದ ಹಕ್ಕು ನೀಡುವ ಮೂಲಭೂತ ಹಕ್ಕಾಗಿ ರೂಪಿಸಿತ್ತು ಎಂದು ಸಿದ್ದರಾಮಯ್ಯ ನೆನಪಿಸಿದರು. ಅದೇ ಅವಧಿಯಲ್ಲಿ, ಆಹಾರ ಭದ್ರತಾ ಕಾಯ್ದೆ. ಉದ್ಯೋಗ ಖಾತ್ರಿ ಕಾಯ್ದೆ. ಮಾಹಿತಿ ಹಕ್ಕು. ಶಿಕ್ಷಣದ ಹಕ್ಕು. ಅರಣ್ಯವಾಸಿಗಳಿಗೆ ಹಕ್ಕು. ಹೀಗೆ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು ಎಂದು ವಿವರಿಸಿದರು.
ಕೋಟ್ಯಂತರ ಕಾರ್ಮಿಕರಿಗೆ ಆಸರೆಯಾಗಿದ್ದ ಯೋಜನೆ: 20 ವರ್ಷಗಳಿಂದ ಜಾರಿಯಲ್ಲಿದ್ದ ಮನರೇಗಾ ಕಾಯ್ದೆಯಡಿ ದೇಶದಲ್ಲಿ 12.16 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ 6.21 ಕೋಟಿ ಮಹಿಳೆಯರು ಎಂಬುದನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು. ಗ್ರಾಮೀಣ ಪ್ರದೇಶದ ಜನರು 365 ದಿನಗಳ ಕಾಲ ಕೆಲಸ ಕೇಳುವ ಹಕ್ಕು ಹೊಂದಿದ್ದರು. ತಮ್ಮ ಊರಲ್ಲಿಯೇ, ತಮ್ಮ ಜಮೀನಿನಲ್ಲಿಯೇ ಕೆಲಸ ಮಾಡಬಹುದಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ
ಹೊಸ ಕಾಯ್ದೆಯಿಂದ ಹಕ್ಕುಗಳಿಗೆ ಕತ್ತರಿ: ಆದರೆ ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ ಕಾಯ್ದೆಯಡಿ, ಕೆಲಸದ ಸ್ಥಳವನ್ನು ಕೇಂದ್ರ ಸರ್ಕಾರ ಅಧಿಸೂಚನೆಯ ಮೂಲಕ ನಿಗದಿ ಮಾಡುತ್ತದೆ. ರಾಜ್ಯ ಸರ್ಕಾರಗಳು 40% ವೆಚ್ಚವನ್ನು ಭರಿಸಬೇಕಾಗಿದೆ. ಕರ್ನಾಟಕ ರಾಜ್ಯಕ್ಕೆ ಮಾತ್ರವೇ ಸುಮಾರು 2,500 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಇದು ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಹೇರಿರುವ ಅನ್ಯಾಯ ಎಂದು ಸಿದ್ದರಾಮಯ್ಯ ಆರೋಪಿಸಿದರು.
“ಇದು ದಶರಥ ರಾಮ, ಸೀತಾ ರಾಮ ಅಥವಾ ಕೌಸಲ್ಯಾ ರಾಮ ಅಲ್ಲ. ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮನ ರಾಮ. ಗಾಂಧೀಜಿಯನ್ನು ಮತ್ತೆ ಕೊಲ್ಲುವ ಪ್ರಯತ್ನ ಇದಾಗಿದೆ” ಎಂದು ಕಟುವಾಗಿ ಟೀಕಿಸಿದರು.
ಇದನ್ನೂ ಓದಿ: ದಾಂಡೇಲಿ ಹಿರಿಯ ವಕೀಲ ಅಜಿತ್ ನಾಯ್ಕ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ನರೇಗಾ ಬಚಾವ್ ಆಂದೋಲನಕ್ಕೆ ಕರೆ: ಹಳೆಯ ಕಾಯ್ದೆಯಡಿ ಕೆಲಸ ಸಿಗದಿದ್ದರೆ ನ್ಯಾಯಾಲಯಕ್ಕೆ ಹೋಗುವ ಹಕ್ಕು ಕಾರ್ಮಿಕರಿಗೆ ಇತ್ತು, ಆದರೆ ಹೊಸ ಕಾಯ್ದೆಯಲ್ಲಿ ಆ ಹಕ್ಕನ್ನೂ ಕಿತ್ತುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. “ನಾವು ‘ನರೇಗಾ ಬಚಾವ್ ಆಂದೋಲನ’ ರೂಪಿಸಿದ್ದೇವೆ. ಇದು ಕೇವಲ ರಾಜಕೀಯ ಹೋರಾಟವಲ್ಲ, ಜನಾಂದೋಲನವಾಗಬೇಕು. ಆ ಕೆಲಸವನ್ನು ನಾವು ಎಲ್ಲರೂ ಸೇರಿ ಮಾಡೋಣ” ಎಂದು ಅವರು ಕರೆ ನೀಡಿದರು.























