ಬೆಂಗಳೂರು: ಒಬ್ಬ ವ್ಯಕ್ತಿಯ ಬೆಳವಣಿಗೆಯ ಪ್ರತಿ ಹಂತದಲ್ಲೂ ಗುರುವಿನ ಸ್ಥಾನ ಎಂಬುದು ಬಹಳ ಮೌಲಿಕವಾದದ್ದು. ಅದನ್ನು ಅರಿತು ಸಾಧನೆ ಮಾಡಬೇಕು ಎಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಿರಿಯ ಕಲಾವಿದೆ ಮಹಾಲಕ್ಷ್ಮೀ ನಟರಾಜನ್ ಹೇಳಿದರು.
ಕಲಾ ಕ್ಷೇತ್ರಕ್ಕೆ ಕಳೆದ ನಾಲ್ಕು ದಶಕಗಳಿಂದ ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಡಾ. ಟಿ.ವಿ. ರಾಮಪ್ರಸಾದ್ ಮತ್ತು ಪ್ರಖ್ಯಾತ ನೃತ್ಯವಿದುಷಿ ಇಂದಿರಾ ಕಡಾಂಬಿ ಅವರ ಅಂಬಾಲಂ ಫೌಂಡೇಶನ್ ಸಂಸ್ಥೆಯು ಮಲ್ಲೇಶ್ವರಂನ ಸೇವಾ ಸದನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ‘ಆರಾಧನಾ’ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗುರು ಎಂಬ ಸ್ಥಾನಕ್ಕೆ ಪರ್ಯಾಯ ಎಂಬುದು ಇಲ್ಲ. ಗುರುವಿನ ಸಮ್ಮುಖದಲ್ಲಿ ಕಲಿತ ವಿದ್ಯೆಯೇ ಅರ್ಥಪೂರ್ಣ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಆನ್‌ಲೈನ್ ಕಲಿಕೆ ಎಂದಿಗೂ ಪರಿಪೂರ್ಣ ಅಲ್ಲ ಎಂದರು. ಹಿರಿಯ ದಿಗ್ಗಜರಾದ ರಾಜಂ ಮತ್ತು ಕಲಾನಿಧಿ ನಾರಾಯಣನ್ ಅವರಿಗೆ 2 ದಿನಗಳ ಈ ಉತ್ಸವ ಸಮರ್ಪಣೆ ಮಾಡಿರುವುದು ಗುರುಭಕ್ತಿಯ ದ್ಯೋತಕವಾಗಿದೆ ಎಂದರು.
ಇದೇ ಸಂದರ್ಭ ಖ್ಯಾತ ನೃತ್ಯ ವಿದುಷಿ, ಹಿರಿಯ ಕಲಾವಿದೆ ಉಷಾ ದಾತಾರ್ ಅವರನ್ನೂ ಗೌರವಿಸಲಾಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತದ ಹಿರಿಯ ವಿದ್ವಾಂಸ ಡಾ. ಟಿ.ವಿ. ರಾಮಪ್ರಸಾದ್, ಖ್ಯಾತ ಭರತನಾಟ್ಯ ನೃತ್ಯವಿದುಷಿ ಇಂದಿರಾ ಕಡಾಂಬಿ ಹಾಜರಿದ್ದರು.
ಉತ್ಸವದ ಎರಡೂ ದಿನ ಕಲಾರಂಗದ ಹಿರಿಯ ವಿದ್ವನ್ಮಣಿಗಳಾದ ಲಲಿತಾರಾಮ್ ರಾಮಚಂದ್ರನ್ ಪ್ರಮೀಳಾ ಗುರುಮೂರ್ತಿ, ಟಿ.ವಿ. ರಾಮಪ್ರಸಾದ್, ಇಂದಿರಾ ಕಡಾಂಬಿ, ಲಕ್ಷ್ಮೀ ಗೋವಿಂದನ್ ಅವರಿಂದ ಪ್ರೌಢ ಉಪನ್ಯಾಸ, ಚರ್ಚೆ, ಸಂವಾದ, ಪ್ರಾತ್ಯಕ್ಷಿಕೆ ನೆರವೇರಿತು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಂಡಿತ್ ಅಭಿಜಿತ್ ಮತ್ತು ತಂಡ, ಆನೂರು ಅನಂತ ಕೃಷ್ಣ ಶರ್ಮ ಮತ್ತು ತಂಡದವರಿಂದ ಕಛೇರಿ ವಿಶೇಷವಾಗಿ ಗಮನ ಸೆಳೆಯಿತು.










