ಖಾಸಗಿ ಕಾರ್ಯಕ್ರಮಕ್ಕೂ ರಾಜಕೀಯ ಬಣ್ಣ:ಎಂ.ಬಿ. ಪಾಟೀಲ್ ಆಕ್ರೋಶ

0
5

ಬೆಂಗಳೂರು: ಜರ್ಮನಿಯ ಫೆಡರಲ್ ಚಾನ್ಸಲರ್ ಫ್ರಿಡ್ರಿಕ್ ಮೆರ್ಝ್ ಅವರ ಕರ್ನಾಟಕ ಭೇಟಿ ವಿಚಾರವಾಗಿ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಹಾಗೂ ವಿಜಯಪುರ ಶಾಸಕ ಎಂ.ಬಿ. ಪಾಟೀಲ್, ಬಿಜೆಪಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜರ್ಮನಿಯ ಫೆಡರಲ್ ಚಾನ್ಸಲರ್ ಅವರ ರಾಜ್ಯ ಭೇಟಿ ಸಂಪೂರ್ಣವಾಗಿ ಖಾಸಗಿ ಹಾಗೂ ಪೂರ್ವನಿಗದಿಯಾಗಿದ್ದ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದರು. “ಅವರ ಭೇಟಿಯ ಉದ್ದೇಶ ಜರ್ಮನಿ ಮೂಲದ ಬಾಷ್ (Bosch) ಕಂಪೆನಿ ಹಾಗೂ ಐಐಎಸ್‌ಸಿ (IISc) ಗೆ ಭೇಟಿ ನೀಡುವುದಷ್ಟೇ ಆಗಿತ್ತು. ರಾಜ್ಯ ಸರ್ಕಾರದೊಂದಿಗೆ ಯಾವುದೇ ಅಧಿಕೃತ ಸಭೆ ಅಥವಾ ಮಾತುಕತೆಗಳು ನಡೆಯಲೇ ಇಲ್ಲ” ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ:  ಅನಧಿಕೃತ ಬ್ಯಾನರ್ ತೆರವು: ನಗರಸಭೆ ಪೌರಾಯುಕ್ತರಿಗೆ ಬೆದರಿಕೆ ಕರೆ…

ಅಧಿಕೃತ ಕಾರ್ಯಕ್ರಮವೇ ಇಲ್ಲದಾಗ ಸಿಎಂ ಹಾಜರಾತಿ ಪ್ರಶ್ನೆಯೇ ಇಲ್ಲ: “ಅಧಿಕೃತ ಸರ್ಕಾರಿ ಕಾರ್ಯಕ್ರಮಗಳೇ ಇಲ್ಲದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಹಾಜರಾತಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ಅಧಿಕೃತ ಸಭೆ ಅಥವಾ ಕಾರ್ಯಕ್ರಮಗಳು ಇದ್ದಿದ್ದರೆ, ಮುಖ್ಯಮಂತ್ರಿಗಳೇ ಸ್ವತಃ ಜರ್ಮನ್ ಚಾನ್ಸಲರ್ ಅವರನ್ನು ಸ್ವಾಗತಿಸುತ್ತಿದ್ದರು ಎಂಬ ಸತ್ಯವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ” ಎಂದು ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಶಿಷ್ಟಾಚಾರದಂತೆ ಸರ್ಕಾರದಿಂದ ಸ್ವಾಗತ–ಬೀಳ್ಕೊಡುಗೆ: ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ, ರಾಜ್ಯ ಸರ್ಕಾರದ ಪರವಾಗಿ ಶಿಷ್ಟಾಚಾರದಂತೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳ ಮೂಲಕ ಜರ್ಮನ್ ಚಾನ್ಸಲರ್ ಅವರಿಗೆ ಔಪಚಾರಿಕ ಸ್ವಾಗತ ಹಾಗೂ ಬೀಳ್ಕೊಡುಗೆ ನೆರವೇರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  ತೇಜಸ್ವಿ – ವಿಸ್ಮಯ : ಲಾಲ್‌ಬಾಗ್‌ನಲ್ಲಿ ಜ.14ರಿಂದ ಫಲಪುಷ್ಪ ಪ್ರದರ್ಶನ

ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆ ಅಥವಾ ಪ್ರೋಟೋಕಾಲ್ ಲೋಪ ನಡೆದಿಲ್ಲ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಅತಿಥಿಯ ಖಾಸಗಿ ಭೇಟಿಗೂ ರಾಜಕೀಯ ಲಾಭ?: “ಅಂತಾರಾಷ್ಟ್ರೀಯ ಅತಿಥಿಯೊಬ್ಬರ ಖಾಸಗಿ ಭೇಟಿಯನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುವ ಬಿಜೆಪಿಯ ನಡೆ ಖಂಡನೀಯ. ಇದು ರಾಜ್ಯದ ಗೌರವಕ್ಕೆ ಧಕ್ಕೆ ತರುವಂತಹ ವರ್ತನೆ” ಎಂದು ಎಂ.ಬಿ. ಪಾಟೀಲ್ ಕಿಡಿಕಾರಿದರು.

“ರಾಜ್ಯದ ಗೌರವದ ವಿಚಾರದಲ್ಲಿ ರಾಜಕೀಯ ಮಾಡುವುದು ನಾಚಿಕೆಗೇಡಿತನ. ಕರ್ನಾಟಕದ ಜನತೆ ಇಂತಹ ರಾಜಕೀಯವನ್ನು ಒಪ್ಪುವುದಿಲ್ಲ” ಎಂದು ಅವರು ಸ್ಪಷ್ಟ ಸಂದೇಶ ನೀಡಿದರು.

Previous articleಅನಧಿಕೃತ ಬ್ಯಾನರ್ ತೆರವು: ನಗರಸಭೆ ಪೌರಾಯುಕ್ತರಿಗೆ ಬೆದರಿಕೆ ಕರೆ…