Home ನಮ್ಮ ಜಿಲ್ಲೆ ಬೆಂಗಳೂರು ಕರ್ನಾಟಕದಲ್ಲಿ NIPER ಸ್ಥಾಪನೆಗೆ ಸಚಿವ ಎಂ.ಬಿ. ಪಾಟೀಲ್ ಮನವಿ

ಕರ್ನಾಟಕದಲ್ಲಿ NIPER ಸ್ಥಾಪನೆಗೆ ಸಚಿವ ಎಂ.ಬಿ. ಪಾಟೀಲ್ ಮನವಿ

0
7

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾಗೆ ಪತ್ರ

ಬೆಂಗಳೂರು: ವಿಜ್ಞಾನ, ಔಷಧ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶಕ್ಕೆ ದಿಕ್ಕು ತೋರಿಸುತ್ತಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (National Institute of Pharmaceutical Education and Research – NIPER) ಸ್ಥಾಪನೆ ಅತ್ಯಂತ ಅಗತ್ಯವಾಗಿದೆ ಎಂದು ಕೈಗಾರಿಕೆ ಮತ್ತು ಮಧ್ಯಮ ಕೈಗಾರಿಕೆಗಳ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಚಿವ ಪಾಟೀಲ್, NIPER ಸ್ಥಾಪನೆಗೆ ಅಗತ್ಯವಿರುವ ಭೂಮಿ, ಮೂಲಸೌಕರ್ಯ, ಆಡಳಿತಾತ್ಮಕ ನೆರವು ಹಾಗೂ ಕೇಂದ್ರದೊಂದಿಗೆ ಸಹಭಾಗಿತ್ವದ ಎಲ್ಲ ಅವಕಾಶಗಳನ್ನು ರಾಜ್ಯ ಸರ್ಕಾರ ಕ್ಷಿಪ್ರಗತಿಯಲ್ಲಿ ಒದಗಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ CBI ದಾಳಿ

ಔಷಧ ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಕರ್ನಾಟಕದ ಬಲ: ಪತ್ರದಲ್ಲಿ ಕರ್ನಾಟಕದ ವೈಜ್ಞಾನಿಕ ಸಾಮರ್ಥ್ಯವನ್ನು ವಿವರಿಸಿರುವ ಸಚಿವರು, ಬೆಂಗಳೂರು ಇಂದು 400ಕ್ಕೂ ಹೆಚ್ಚು ಬಯೋಟೆಕ್ನಾಲಜಿ (BT) ಕಂಪನಿಗಳಿಗೆ ಕೇಂದ್ರವಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆ (IISc), ರಾಷ್ಟ್ರೀಯ ಜೀವಶಾಸ್ತ್ರ ಕೇಂದ್ರ (NCBS), ಇನ್ಸ್ಟಿಟ್ಯೂಟ್ ಆಫ್ ಬಯೋಇನ್ಫಾರ್ಮಾಟಿಕ್ಸ್ ಅಂಡ್ ಅಪ್ಲೈಡ್ ಬಯೋಟೆಕ್ನಾಲಜಿ (IBAB) ಸೇರಿದಂತೆ ವಿಶ್ವದರ್ಜೆಯ ಸಂಶೋಧನಾ ಸಂಸ್ಥೆಗಳ ನೆಲೆ ಎಂದು ಉಲ್ಲೇಖಿಸಿದ್ದಾರೆ.

ಇದಲ್ಲದೆ ರಾಜ್ಯ ಸರ್ಕಾರದ ಬಯೋ-ಇನ್ನೋವೇಶನ್ ಸೆಂಟರ್ ಹಾಗೂ ಬಯೋಟೆಕ್ನಾಲಜಿ ನೀತಿಯ ಬೆಂಬಲದಿಂದ ಬಲಿಷ್ಠ ಸ್ಟಾರ್ಟ್‌ಅಪ್ ಪರಿಸರ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಔಷಧೋದ್ಯಮದಲ್ಲಿ ಕರ್ನಾಟಕದ ಪಾಲು: ದೇಶದ ಒಟ್ಟು ಬಯೋಟೆಕ್ನಾಲಜಿ ಕಂಪನಿಗಳಲ್ಲಿ ಶೇ.60ರಷ್ಟು ಕಂಪನಿಗಳು ಕರ್ನಾಟಕದಲ್ಲೇ ಸ್ಥಿತಿಯಾಗಿದ್ದು, ಭಾರತದಿಂದ ಆಗುವ ಒಟ್ಟು ಔಷಧ ರಫ್ತಿನಲ್ಲಿ ಶೇ.12ರಷ್ಟು ಪಾಲು ಕರ್ನಾಟಕದ್ದಾಗಿದೆ. ಕ್ಲಿನಿಕಲ್ ಸಂಶೋಧನೆ, API (Active Pharmaceutical Ingredients) ಉತ್ಪಾದನೆ ಹಾಗೂ ವೈದ್ಯಕೀಯ ಸಾಧನಗಳ ತಯಾರಿಕೆಯಲ್ಲಿ ಕರ್ನಾಟಕ ಪ್ರಮುಖ ಕೇಂದ್ರವಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಯಿಂದ ಪರಮೇಶ್ವರ್ ಸಿಎಂ ಮಾಡಿ ಅಂದ್ರೆ, ಬೇಡಾ ಅನ್ನೋಕಾಗುತ್ತಾ?

NIPER ಸ್ಥಾಪನೆ – ರಾಷ್ಟ್ರ ಹಿತದೃಷ್ಟಿ: ಈ ಹಿಂದೆ ಬೆಂಗಳೂರಿನಲ್ಲಿ NIPER ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾಪಗಳು ಬಂದಿದ್ದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂದು ಉಲ್ಲೇಖಿಸಿರುವ ಎಂ.ಬಿ. ಪಾಟೀಲ್, ಇದೀಗ ರಾಜ್ಯದ ವೈಜ್ಞಾನಿಕ ಮೂಲಸೌಕರ್ಯ, ಮಾನವ ಸಂಪನ್ಮೂಲ ಹಾಗೂ ಕೈಗಾರಿಕಾ ಸಾಮರ್ಥ್ಯವನ್ನು ಪರಿಗಣಿಸಿ ಕನಿಷ್ಠ ಈಗಲಾದರೂ NIPER ಅನ್ನು ಕರ್ನಾಟಕಕ್ಕೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ NIPER ಸ್ಥಾಪನೆಯಾದರೆ ಔಷಧ ಸಂಶೋಧನೆಗೆ ಹೊಸ ಆಯಾಮ ಸಿಗುವುದರ ಜೊತೆಗೆ, ಕುಶಲ ಔಷಧ ತಜ್ಞರ ತರಬೇತಿ, ಉನ್ನತ ಮಟ್ಟದ ಸಂಶೋಧನೆ ಮತ್ತು ಭಾರತವನ್ನು ಹೈ-ವ್ಯಾಲ್ಯೂ ಫಾರ್ಮಾ ಇನೋವೇಶನ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

NIPER ಅನ್ನು ಕರ್ನಾಟಕಕ್ಕೆ ಮಂಜೂರು ಮಾಡುವುದು ದೇಶದ ಆರೋಗ್ಯ, ಸಂಶೋಧನೆ ಮತ್ತು ಭವಿಷ್ಯದ ವಿಜ್ಞಾನ ಕ್ಷೇತ್ರಕ್ಕೆ ಮಾಡಿದ ಮಹತ್ವದ ಹೂಡಿಕೆ ಆಗಲಿದೆ ಎಂದು ಸಚಿವ ಪಾಟೀಲ್ ತಮ್ಮ ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.