ಬೇಡ್ತಿ – ಅಘನಾಶಿನಿ ನದಿ ತಿರುವಿಗೆ ಭಾರೀ ವಿರೋಧ: ಜ. 11ಕ್ಕೆ ದೊಡ್ಡ ಆಂದೋಲನ

0
3

ಬೆಂಗಳೂರು: ಪಶ್ಚಿಮ ಘಟ್ಟದ ನದಿಗಳನ್ನು ಉಳಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಶಿರಸಿಯ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಕರೆ ನೀಡಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಜನ ಜಾಗೃತಿ ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪಶ್ಚಿಮ ಘಟ್ಟದ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಅವೈಜ್ಞಾನಿಕವಾಗಿದ್ದು, ಸರ್ಕಾರಗಳು ಇಂತಹ ಯೋಜನೆ ರೂಪಿಸುವಾಗ ದೀರ್ಘಕಾಲಿಕ ಚಿಂತನೆ ಹೊಂದಿರದಿದ್ದರೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಗಳು ಪತನವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಅಧಿಕಾರದಲ್ಲಿ ಇರುವವರು ನಮ್ಮ ಬಳಿ ಬಂದಾಗ ದೇಶದಲ್ಲಿ 150 ಕೋಟಿ ಜನರಿದ್ದಾರೆ ಆದ್ದರಿಂದ ಅಭಿವೃದ್ಧಿ ಅವಶ್ಯವಾಗಿದೆ. ಕಾನೂನು ಇರುವುದು ಸತ್ಯ, ಪರಿಸರ ಹಾನಿ ಆಗುವುದು ಸತ್ಯ. ಹಾಗಾಗಿ ಸ್ವಲ್ಪ ತ್ಯಾಗ ಮಾಡಬೇಕೆಂದು ಕೇಳುತ್ತಾರೆ. ಇವರಿಗೆಲ್ಲರಿಗೂ ನಾನು ವೈಜ್ಞಾನಿಕ ಚಿಂತನೆ ಮಾಡಬೇಕು ಎಂದು ಉತ್ತರ ಕೊಟ್ಟಿದ್ದೇನೆ ಎಂದು ತಿಳಿಸಿದರು. ಈಗಾಗಲೇ ಉತ್ತರ ಕನ್ನಡ ಜಿಲ್ಲೆಗೆ ಪರಿಸರ ಸ್ನೇಹಿ ಕೊಡುಗೆಯ ಬಗ್ಗೆ ವರದಿ ಕೊಟ್ಟಿದ್ದೇವೆ. ಇದರಲ್ಲಿ ಮುಖ್ಯವಾಗಿ ನದಿ ನೀರಿನ ಬಳಕೆ ಬಗ್ಗೆ ಹೇಳಿದ್ದೇವೆ ಎಂದ ಅವರು, ಇಲ್ಲಿ ಸ್ಥಳೀಯ ಜನರ ಸಹಭಾಗಿತ್ವದಲ್ಲಿ ನೀರಾವರಿ ಯೋಜನೆ ಆಗಬೇಕಿದೆ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಹಾವಿನ ವಿಷ ಪತ್ತೆಗೆ ಕನ್ನಡಿಗನಿಂದ ಸೋವಿ ಕಿಟ್!

ಉತ್ತರ ಕನ್ನಡದಲ್ಲೂ ಕುಡಿಯುವ ನೀರಿನ ಸಮಸ್ಯೆಯಿದೆ. ಕೆಲವೆಡೆ ಕೃಷಿಗೂ ನೀರು ಸಾಕಾಗುವುದಿಲ್ಲ. ಇದೆಲ್ಲದರ ಬಗ್ಗೆ ಯೋಚಿಸದವರು ಇಲ್ಲಿನ ನದಿ ನೀರನ್ನು ಹೊರಗಡೆ ಕಳಿಸಬೇಕೆಂದೆ ಯೋಚಿಸುತ್ತಿದ್ದಾರೆ. ಇದು ಆಗಬಾರದು ಎಂದು ಮನವಿ ಮಾಡಿದರು. ಎತ್ತಿನ ಹೊಳೆ ಏನಾಗಿದೆ ಯೋಚಿಸಬೇಕು. ಬಯಲು ನೀರು ತಲುಪಿಸಬೇಕೆಂದು ಮಾಡಿದ ಈ ಯೋಜನೆ ಅದ್ವಾನ ಆಗಿದೆ. ನೀರು ಬಯಲು ಸೀಮೆಗೆ ಮುಟ್ಟಲಿಲ್ಲ. ಆದರೀಗ ಎತ್ತಿನ ಹೊಳೆಯಲ್ಲಿ ಎತ್ತಲಾರದಷ್ಟು ಹೊಳೆ ತುಂಬಿದೆ. ಇದೇ ಸ್ಥಿತಿ ನಮ್ಮ ನದಿಗಳಿಗೂ ಬರಲಿದೆ. ಹಾಗಾಗಿ ಎಲ್ಲರೂ ಗಟ್ಟಿ ಧ್ವನಿ ಎತ್ತಬೇಕು ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಹೋರಾಟಕ್ಕೆ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ದೈವಿ ಶಕ್ತಿ ಇದ್ದಂಗೆ. ಪಶ್ಚಿಮ ಘಟ್ಟದ ಸೂಕ್ಷ್ಮತೆಗಳನ್ನು ಅರಿಯದೆ ಯೋಜನೆಯನ್ನು ಜಾರಿಗೊಳಿಸಿದರೆ ಇದರ ದುಷ್ಪರಿಣಾಮ ರಾಜ್ಯವೇ ಅನುಭವಿಸಲಿದೆ ಎಂದು ತಿಳಿಸಿದರು.

ಶರಾವತಿ, ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗೆ ಜನರು ಕಂಪಿಸಿದ್ದಾರೆ. ಜನರು ಒಗ್ಗಟ್ಟಾಗಿ ಇದರ ವಿರುದ್ಧ ಧ್ವನಿ ಎತ್ತಬೇಕು. ಈ ಮೂಲಕ ಭವಿಷ್ಯದ ಜನಾಂಗದ ರಕ್ಷಣೆ ಮಾಡಬೇಕು ಎಂದು ಹೇಳಿದರು.

ಲೋಕ ಶಿಕ್ಷಣ ಟ್ರಸ್ಟಿನ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿ, ಈ ಯೋಜನೆಗೆ ಇನ್ನೂ ಡಿಪಿಆರ್ ಅನುಮೋದನೆ ಆಗಿಲ್ಲ. ಈ ಭಾಗದಿಂದ ಬಯಲು ಸೀಮೆಗೆ ನೀರು ತಲುಪಿಸಲು ಸುಮಾರು 12ರಿಂದ 23 ಸಾವಿರ ಕೋಟಿ ಅನುದಾನ ಬೇಕಾಗಲಿದೆ. ಅಷ್ಟು ಹಣ ಸರ್ಕಾರದಲ್ಲಿ ಇಲ್ಲ. ಈ ಯೋಜನೆ ಜಾರಿಯಾಗಲ್ಲ ಎಂದು ಹೇಳಿದರು. ಪಶ್ಚಿಮಘಟ್ಟದ ಈ ಹೋರಾಟಕ್ಕೆ ಹೆಚ್ಚಿನ ಬಲ ತುಂಬಲು ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಯೋಜನೆಯನ್ನು ಬಲವಾಗಿ ವಿರೋಧಿಸಬೇಕು. ಪಶ್ಚಿಮ ಘಟ್ಟದ ನದಿಗಳನ್ನು ಖಾಲಿಯಾಗದಂತೆ ನಾವು ಎಚ್ಚರಿಕೆ ವಹಿಸಬೇಕು ಎಂದರು.

ಶಿರಸಿಯಲ್ಲಿ ಜ. 11ಕ್ಕೆ ದೊಡ್ಡ ಆಂದೋಲನ: ಪಶ್ಚಿಮಘಟ್ಟ ನದಿ ತಿರುವು ವಿರೋಧಿಸಿ ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಪೈಕಿ ವೈಜ್ಞಾನಿಕ ಚಿಂತನೆ, ಹೋರಾಟ, ಜನಾಂದೋಲನ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಹೋರಾಟ ನಡೆಸಬೇಕಿದೆ ಎಂದು ಶ್ರೀಗಳು ಹೇಳಿದ್ದಾರೆ.

Previous articleಹಾವಿನ ವಿಷ ಪತ್ತೆಗೆ ಕನ್ನಡಿಗನಿಂದ ಸೋವಿ ಕಿಟ್!